×
Ad

ತಿಪಟೂರು: ಬೀದಿನಾಯಿ ದಾಳಿಗೆ ಆರು ವರ್ಷದ ಬಾಲಕಿ ಬಲಿ

Update: 2025-05-25 15:59 IST

ಸಾಂದರ್ಭಿಕ ಚಿತ್ರ | PC : PTI

ತಿಪಟೂರು: ತಾಲೂಕಿನ ಕಸಬಾ ಹೋಬಳಿ ಅಯ್ಯನಬಾವಿ ಗ್ರಾಮದಲ್ಲಿ ಬೀದಿನಾಯಿಗಳ ದಾಳಿಗೆ ತುತ್ತಾದ ಆರು ವರ್ಷದ ಬಾಲಕಿ ನವ್ಯಾ ಮೃತಪಟ್ಟಿದ್ದಾಳೆ.

ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಸಂಸ್ಕಾರಕ್ಕಾಗಿ ಅಯ್ಯನಬಾವಿ ಗ್ರಾಮಕ್ಕೆ ತರಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮತ್ತಿಹಳ್ಳಿ ಗ್ರಾಪಂ ಪಿ.ಡಿ.ಓ ಶಿವರಾಜ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು. ಮಗುವಿನ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದ ಘಟನೆ ನಡೆಯಿತು.

ಅಯ್ಯನಬಾವಿ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದೆ. ರಾತ್ರಿವೇಳೆ ಜನ ಓಡಾಡುವುದು ಕಷ್ಟವಾಗಿದೆ. ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಅನೇಕ ಬಾರಿ ಗ್ರಾಪಂ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ. ತಾಲೂಕು ಪಂಚಾಯತ್ ಅಧಿಕಾರಿಗಳು ಮಾತ್ರ, ನಾಯಿ ಹಿಡಿಯಲು ಹಣ ಮೀಸಲಿರಿಸಲಾಗಿದೆ ಅನೋ ಉತ್ತರ ನೀಡಿ, ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಮೃತ ಮಗುವಿನ ತಂದೆ, ತಾಯಿ ಇಬ್ಬರೂ ಅಂಗವಿಕಲರು. ಕುಟುಂಬಕ್ಕೆ ಆಸರೆಯಾಗ ಬೇಕಿದ ಮಗು ಜೀವ ಕಳೆದುಕೊಂಡಿದೆ. ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಸ್ಥಳಕ್ಕೆ ತಾಪಂ ಇಒ ಸುದರ್ಶನ್ ಭೇಟಿ ನೀಡಿ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಸರಕಾರದಿಂದ ದೊರೆಯುವ ಪರಿಹಾರ ಹಾಗೂ ಸವಲತ್ತುಗಳನ್ನ ದೊರಕಿಸಲು ಮೇಲಾಧಿಕಾರಿಗಳು ಹಾಗೂ ಶಾಸಕರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮತ್ತಿಹಳ್ಳಿ ಗ್ರಾಪಂ ಪಿಡಿಒ ಶಿವರಾಜ್ , ತಿಪಟೂರು ಗ್ರಾಮಾಂತರ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಾಗರಾಜು, ಮುಖಂಡರಾದ ಎಂ.ಎನ್ ಕಾಂತರಾಜು, ಕೆಪಿಸಿಸಿ ಸದಸ್ಯ ಯೋಗೇಶ್, ಮಲ್ಲೇನಹಳ್ಳಿ ಕಾಂತರಾಜು, ಮಹೇಶ್ ಮತ್ತಿತರರು ಭೇಟಿ ನೀಡಿ ಮೃತ ಮಗುವಿನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News