×
Ad

ಸಂಸತ್ತಿನಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಲು ಅವಕಾಶ ನೀಡದೆ ಧ್ವನಿ ಅಡಗಿಸುವ ಯತ್ನ ನಡೆದಿದೆ: ಡಿಕೆಶಿ

Update: 2024-02-08 15:15 IST

ಹೊಸದಿಲ್ಲಿ, ಫೆ.8:“ಸಂಸತ್ತಿನಲ್ಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಮಾತನಾಡಲೂ ಅವಕಾಶ ಕೊಡದೆ, ನಮ್ಮ ಧ್ವನಿ ಅಡಗಿಸುವ ಯತ್ನ ನಡೆದಿದೆ. ಜತೆಗೆ ಕೇಂದ್ರ ಸರಕಾರ ರಾಜ್ಯದ ಪ್ರತಿ ಬಡವನ ಹೊಟ್ಟೆ ಮೇಲೆ ಹೊಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಮಾತಿನ ನಂತರ ಕಲಾಪ ಅಂತ್ಯಗೊಳಿಸಿ, ರಾಜ್ಯದ ಪರ ಸುರೇಶ್ ಧ್ವನಿ ಎತ್ತಲು ಅವಕಾಶ ಕೊಡದೆ ಅನ್ಯಾಯ ಮಾಡಲಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯದ ಪರವಾಗಿ ಮಾತನಾಡದೆ ಪಕ್ಷಪಾತಿಯಾಗಿ ಮಾತನಾಡುತ್ತಿದ್ದರು. ನಮ್ಮ ಪಕ್ಷದ ಎಲ್ಲಾ ಸಚಿವರು, ಶಾಸಕರು, ಸಂಸದರು ದಿಲ್ಲಿಗೆ ಬಂದು ರಾಜ್ಯದ ಪರ ದನಿ ಎತ್ತಿದರು. ಈ ಬಗ್ಗೆ ಬಿಜೆಪಿ ಸಂಸದರುಗಳಿಗೆ ನಾಚಿಕೆಯಾಗಬೇಕು.

ನಾವು ರಾಜ್ಯದ ಕೂಲಿ ಕಾರ್ಮಿಕರ ಪರವಾಗಿ ಹೋರಾಡುತ್ತೇವೆ. ಉದ್ಯೋಗ ಖಾತ್ರಿ ಯೋಜನೆ ಹಾಗೂ ರಾಜ್ಯದ ಅಭಿವೃದ್ದಿಗೆ ಬೇಕಾದ ಅನುದಾನಕ್ಕಾಗಿ ಹೋರಾಡುತ್ತೇವೆ ಎಂದರು.

ಕರ್ನಾಟಕ ಸರ್ಕಾರ ನೀಡಿರುವ ಅಂಕಿ-ಅಂಶಗಳು ಸುಳ್ಳು ಎಂದು ಬಿಜೆಪಿ ಹೇಳುತ್ತಿದೆ ಎಂದು ಮಾಧ್ಯಮದರು ಪ್ರಶ್ನಿಸಿದಾಗ, “ಬಿಜೆಪಿಯವರು ಸುಳ್ಳು ಎನ್ನುತ್ತಿದ್ದಾರೆ. ನಾವು ಸತ್ಯ ಎನ್ನುತ್ತಿದ್ದೇವೆ. ಬಿಜೆಪಿಯವರು ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳುತ್ತಿದ್ದಾರೆ. ನಾವು ಶ್ವೇತ ಪತ್ರವನ್ನೇ ಅವರ ಮುಂದೆ ಇಡುತ್ತೇವೆ. ನಾವು ಯಾವುದೇ ಸುಳ್ಳು ಹೇಳುತ್ತಿಲ್ಲ.

ಕೇಂದ್ರ ಬಜೆಟ್ ಅನ್ನು ನಾನು ತಯಾರು ಮಾಡಿಲ್ಲ, ಕೇಂದ್ರ ಸರಕಾರವೇ ತಯಾರು ಮಾಡಿದೆ. ಅದರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಹಣಕಾಸು ಆಯೋಗ ಬೆಂಗಳೂರಿಗೆ 5-6 ಸಾವಿರ ಕೋಟಿ ರೂ. ಕೊಡಬೇಕು ಎಂದು ಶಿಫಾರಸು ಮಾಡಿತ್ತು, ಇವನ್ನು ಕೊಟ್ಟಿದ್ದಾರೆಯೇ? ಮುಖ್ಯಮಂತ್ರಿ ಮತ್ತು ಸಚಿವ ಕೃಷ್ಣ ಬೈರೇಗೌಡರು ಬರ ಪರಿಹಾರ ಬಿಡುಗಡೆ ಮಾಡಲು ಮನವಿ ಕೊಟ್ಟರೂ ಏಕೆ ಒಂದೂ ರೂಪಾಯಿಯನ್ನೂ ಕೊಟ್ಟಿಲ್ಲ” ಎಂದು ಪ್ರಶ್ನಿಸಿದರು.

ಬರ ಪರಿಹಾರವಾಗಿ ರಾಜ್ಯಕ್ಕೆ 6 ಸಾವಿರ ಕೋಟಿ ರೂ.ನ್ನು ಮುಂಗಡವಾಗಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ಕೊಟ್ಟಿದ್ದಾರೆ ಎಂದಾಗ “ಒಂದೇ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡಲಿದ್ದಾರೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News