×
Ad

ಕೇರಳದ ವಿರುದ್ದ ಕರ್ನಾಟಕ ಸಿಎಂ ಹೇಳಿಕೆ ವಾಸ್ತವಕ್ಕೆ ವಿರುದ್ಧ: ಕೆ. ಆರ್. ಜಯಾನಂದ

Update: 2026-01-12 20:20 IST

ಕೆ ಆರ್ ಜಯಾನಂದ

ಮಂಜೇಶ್ವರ: ಮಲಯಾಳಂ ಭಾಷಾ ಮಸೂದೆ ಹೆಸರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಸಚಿವರು ಮಸೂದೆಯಲ್ಲೇನಿದೆ ಎಂಬುವುದನ್ನು ಅರಿಯದೆ ಕೇರಳ ಮತ್ತು ಮಲಯಾಳಂ ಬಗ್ಗೆ ವಾಸ್ತವದ ವಿರುದ್ಧ ಹೇಳಿಕೆ ನೀಡಿದ್ದು ಸರಿಯಲ್ಲ. ಈ ಹೇಳಿಕೆಯು ಕೇರಳ ವಿರೋಧಿ ಧೋರಣೆ ತಳೆಯುತ್ತಿದ್ದಾರೆ ಎಂಬುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ಆರ್ ಜಯಾನಂದ ಹೇಳಿದ್ದಾರೆ.

ಮಲಯಾಳಂ ಭಾಷಾ ಮಸೂದೆಯನ್ನು ಕೇರಳ ಸರಕಾರ ವರ್ಷದ ಹಿಂದೆಯೇ ಮಂಡಿಸಿ ಅಂಗೀಕರಿಸಿತ್ತು. ಆದರೆ ಅಂದು ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕದೇ ಮರಳಿಸಿದ್ದರು. ಪರಿಷ್ಕೃತ ಮಸೂದೆಯಲ್ಲಿ ಕೇರಳದ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರಿಗೆ ಅವರವರ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಅವರು ಬಯಸಿದಲ್ಲಿ ಮಲಯಾಳಂ ಕಲಿಕೆಗೂ ಅವಕಾಶವಿದೆ ಎಂದಿದೆ. ಕೇರಳ ಸರಕಾರ ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಕಸಿಯುತ್ತಿಲ್ಲ, ಬದಲಾಗಿ ಸಂರಕ್ಷಿಸುತ್ತಿದೆ. ಈ ವಾಸ್ತವಗಳನ್ನು ಅರಿಯದೆ ಮಸೂದೆಯನ್ನೇ ಓದದೆ ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಚಿವರು ಬಹಿರಂಗ ಹೇಳಿಕೆ ನೀಡುತ್ತಿರುವುದು ಅಸಮಂಜಸವಾಗಿದೆ ಎಂದು ಅವರು ಹೇಳಿದರು.

ಭಾಷಾ ಮಸೂದೆಯ ಕುರಿತು ಕರ್ನಾಟಕ ಸಿಎಂ ಕೇರಳ ಜೊತೆ ಮಾತುಕತೆ ನಡೆಸಿ ವಿಷಯವೇನೆಂದು ತಿಳಿಯಬಹುದಿತ್ತು. ಆದರೆ ಹಾಗೆ ಮಾಡದೆ ಬಹಿರಂಗವಾಗಿ ಹೇಳಿಕೆ ನೀಡುವುದು ಉಭಯ ರಾಜ್ಯಗಳ ಸಂಬಂಧಕ್ಕೆ ಹಾನಿ ಉಂಟುಮಾಡುವಂತಿದೆ. ಕೇರಳ ಕರ್ನಾಟಕದ ಜೊತೆ ಭಾಷಾ ಸಂಘರ್ಷದ ಸಮರ ಬಯಸುತ್ತಿಲ್ಲ ಮತ್ತು ಸೌಹಾರ್ದ ಸಂಬಂಧವನ್ನೇ ಬಯಸುತ್ತಿದೆ. ವಾಸ್ತವ ಅರಿಯದೆ ಕರ್ನಾಟಕವು ಕೇರಳವನ್ನು ಟೀಕಿಸುವಾಗ ಕೇರಳದ ಕಾಂಗ್ರೆಸ್ಸಿಗರು ಸುಮ್ಮನಿರುವುದು ಸಂಶಯಾಸ್ಪದವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಭಾಷಾ ಮಸೂದೆ 2025 ಸೆಕ್ಷನ್ 6/1 ರ ಪ್ರಕಾರ ಕೇರಳದಲ್ಲಿನ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯ ಮೊದಲ ಭಾಷೆಯಾಗಿದೆ. ಸೆಕ್ಷನ್ 6/3 ರಲ್ಲಿ ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಭಾಷೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಭಾಷೆಯ ಜೊತೆಗೆ ಮಲಯಾಳಂ ಎರಡನೇ ಪಠ್ಯವಾಗಿ ಅಧ್ಯಯನ ಮಾಡುವ ಅವಕಾಶ ನೀಡಲಾಗಿದೆ. ಕೇರಳದಲ್ಲಿ ತಮಿಳು ಮತ್ತು ಕನ್ನಡ ಭಾಷೆ ಅಲ್ಪಸಂಖ್ಯಾತರು ಎಂಬ ಘೋಷಣೆ ಮಾಡಲಾದ ಪ್ರದೇಶದಲ್ಲಿರುವ ರಾಜ್ಯ ಸರಕಾರದ ಕಾರ್ಯಾಲಯ ಇಲಾಖೆಯ ಮುಖ್ಯಸ್ಥರು ರಾಜ್ಯ ಸರ್ಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ತಮ್ಮ ಪತ್ರ ವ್ಯವಹಾರವನ್ನು ತಮ್ಮ ತಮ್ಮ ಮಾತೃಭಾಷೆಯಲ್ಲಿ (ಕನ್ನಡ, ತಮಿಳು) ನಡೆಸಬಹುದು. ಉತ್ತರವೂ ಅವರವರ ಭಾಷೆಯಲ್ಲಿ ನೀಡಬೇಕು. ಕೇರಳದ ಮಾತೃಭಾಷೆ ಯಾಗಿರುವ ಮಲಯಾಳಂ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅನುಸಾರವಾಗಿ ರಾಜ್ಯದ ಶಾಲೆಗಳಲ್ಲಿ ಲಭ್ಯವಿರುವ ತಮ್ಮ ಭಾಷೆಗಳಲ್ಲಿ ಅಧ್ಯಯನ ಮುಂದುವರಿಸಲು ಅವಕಾಶವಿದೆ. ಕೇರಳದಲ್ಲಿ ಅಧ್ಯಯನ ಮಾಡುವ ಮಾತೃಭಾಷೆ ಮಲಯಾಳಂ ಅಲ್ಲದವರಿಗೆ 9ನೇ ಹತ್ತನೇ ತರಗತಿ ಹಾಗೂ ಹಿರಿಯ ಪ್ರಾಥಮಿಕ ಮಟ್ಟದ ಪರೀಕ್ಷೆಗಳಲ್ಲಿ ಮಲಯಾಳಂ ಪರೀಕ್ಷೆ ಬರೆಯುವ ಕಡ್ಡಾಯದಿಂದ ವಿನಾಯಿತಿ ಇದೆ ಎಂದು ಅವರು ಹೇಳಿದರು.

ಭಾರತದ ಸಂವಿಧಾನದ ಅಡಿಯಲ್ಲಿ ಸತ್ಯ ಪ್ರತಿಜ್ಞೆ ಮಾಡಿ ಅಧಿಕಾರಕ್ಕೆ ಏರಿದ ಹಿರಿಯ ರಾಜಕೀಯ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೀಡುವ ಹೇಳಿಕೆಗಳು ಭಾಷೆಯ ಹೆಸರಲ್ಲಿ ಕೇರಳದಲ್ಲಿ ಗಲಭೆ ಎಬ್ಬಿಸುವ ಹುನ್ನಾರವಾಗಿದೆ. ಕರ್ನಾಟಕದ ಗಡಿ ಪ್ರದೇಶವಾದ ದಕ್ಷಿಣ ಕನ್ನಡದಲ್ಲಿರುವ ಮಲಯಾಳಂ ಮಾತೃ ಭಾಷೆಯವರಿಗೆ ಅಲ್ಲಿ ಮಲಯಾಳಂನಲ್ಲಿ ಕಲಿಯುವ ಅವಕಾಶ ನೀಡಲು ಇವರು ತಯಾರಿದ್ದಾರೆಯೇ ಎಂದು ಸ್ಪಷ್ಟ ಪಡಿಸಬೇಕು ಎಂದು ಕೆ ಆರ್ ಜಯಾನಂದ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News