×
Ad

ಕಾಸರಗೋಡು: ಒಂಟಿ ವೃದ್ಧೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿ ಬಂಧನ

Update: 2026-01-17 09:41 IST

ಕಾಸರಗೋಡು: ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂಬ್ಡಾಜೆ ಮವ್ವಾರ್‌ನಲ್ಲಿ ಬುಧವಾರ ನಡೆದ ಒಂಟಿ ವೃದ್ಧೆಯ ಸಾವಿನ ಪ್ರರಕರಣವು, ಕೊಲೆ ಎಂಬುವುದಾಗಿ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬದಿಯಡ್ಕ ಪೆರಡಾಲದ ರಮೇಶ್ ನಾಯ್ಕ್ (47) ಎಂದು ಗುರುತಿಸಲಾಗಿದೆ. ಕೊಲೆಗೀಡಾದವರು ಮವ್ವಾರ್ ಅಜಿಲ ನಿವಾಸಿ ಪುಷ್ಪಲತಾ ಶೆಟ್ಟಿ (70). ಬುಧವಾರ ಬೆಳಿಗ್ಗೆ ಅವರು ತಮ್ಮ ಮನೆಯೊಳಗೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಂಬಂಧಿಕರ ಮನವಿಯ ಮೇರೆಗೆ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂಬುದು ಸಾಬೀತಾಗಿದೆ.

ಆರೋಪಿಯು ವೃದ್ಧೆಯ ಕತ್ತು ಹಿಸುಕಿ ಕೊಲೆಗೈದು, ಅವರ ಕುತ್ತಿಗೆಯಲ್ಲಿದ್ದ ನಾಲ್ಕು ಪವನ್ ಚಿನ್ನಾಭರಣವನ್ನು ದರೋಡೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಬಗ್ಗೆ ಲಭಿಸಿದ ಸುಳಿವಿನ ಆಧಾರದ ಮೇಲೆ ಶುಕ್ರವಾರ ಮಧ್ಯಾಹ್ನ ಬದಿಯಡ್ಕ ಠಾಣಾ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಕೊಲೆಗೀಡಾದ ಮಹಿಳೆ ಪ್ರತಿರೋಧಿಸುವ ವೇಳೆ ಆರೋಪಿಯ ಕೈಗೆ ಕಚ್ಚಿದ ಗಾಯಗಳಿದ್ದು, ಇದು ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ. ಅಲ್ಲದೆ ಮಹಿಳೆಯ ಕುತ್ತಿಗೆ, ಮುಖ ಹಾಗೂ ಎದೆಯ ಭಾಗದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ತನಿಖೆಗೆ ಸಹಕಾರಿಯಾಗಿದೆ.

ಆರೋಪಿ ಬಚ್ಚಿಟ್ಟಿದ್ದ ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ರಮೇಶ್ ನಾಯ್ಕ್ ಕೂಲಿ ಕಾರ್ಮಿಕನಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News