ಆರಿಕ್ಕಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ: ಶಾಸಕ ಅಶ್ರಫ್ ಸಹಿತ 15ಕ್ಕೂ ಅಧಿಕ ಮಂದಿ ಪೊಲೀಸ್ ವಶಕ್ಕೆ
ಪ್ರತಿಭಟನಾಕಾರರ ಚಪ್ಪರ ತೆರವು, ಟೋಲ್ ಸಂಗ್ರಹ ಪುನಾರಂಭ
ಮಂಜೇಶ್ವರ, ಜ.15: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಗೇಟ್ ನಲ್ಲಿ ಟೋಲ್ ವಸೂಲಾತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸೇರಿದಂತೆ 15ಕ್ಕೂ ಅಧಿಕ ಮಂದಿಯನ್ನು ಕುಂಬಳೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಅನಿರ್ದಿಷ್ಟಾವಧಿ ಧರಣಿಯ ಹಿನ್ನೆಲೆಯಲ್ಲಿ ಟೋಲ್ ಗೇಟ್ ಬಳಿ ಹಾಕಿದ್ದ ಚಪ್ಪರವನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಶಾಸಕರ ಜೊತೆಗೆ, ಸಿಪಿಎಂ ಕುಂಬಳೆ ವಲಯ ಕಾರ್ಯದರ್ಶಿ ಸಿ.ಎ.ಝುಬೈರ್, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್ ಹಾಜಿ, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಅಶ್ರಫ್ ಕಾರ್ಲೆ, ಎ.ಕೆ.ಆರಿಫ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು ಮೊದಲಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ರಾತ್ರಿ ಅಹಿತಕರ ಘಟನೆಗೆ ಸಂಬಂಧಿಸಿ 500ಕ್ಕೂ ಅಧಿಕ ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಪೇಟೆಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರ ಗುಂಪು ಟೋಲ್ ಗೇಟ್ ನ ಸಿಸಿಟಿವಿ ಕ್ಯಾಮರಾ, ಸ್ಕ್ಯಾನರ್, ಬ್ಯಾರಿಕೇಡ್ ಹಾಗೂ ಗಾಜುಗಳನ್ನು ಹಾನಿಗೊಳಿಸಿತ್ತು. ಈ ಬೆಳವಣಿಗೆಯ ಹಿನ್ನಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಿಂದೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶಾಸಕ ಎ.ಕೆ.ಎಂ.ಅಶ್ರಫ್ ರಲ್ಲಿ ಮನವಿ ಮಾಡಿದ್ದರು. ಆದರೆ ಅವರು ಪ್ರತಿಭಟನೆ ಹಿಂಪಡೆಯಲು ಸಮ್ಮಿತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಶಾಸಕ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ರಾತ್ರಿಯಿಂದ ಸ್ಥಗಿತಗೊಂಡಿದ್ದ ಟೋಲ್ ಸಂಗ್ರಹ ಗುರುವಾರ ಬೆಳಗ್ಗೆಯಿಂದ ಪುನಾರಂಭಗೊಂಡಿದೆ.