ಕುಂಬಳೆ ಟೋಲ್ ಗೇಟ್ ಪ್ರಕರಣ: 500 ಮಂದಿಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು
ಕಾಸರಗೋಡು:ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಗೇಟ್‌ನಲ್ಲಿ ಬುಧವಾರ ರಾತ್ರಿ ನಡೆದ ಘಟನೆಯ ಸಂಬಂಧ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸೇರಿದಂತೆ ಸುಮಾರು 500 ಮಂದಿ ವಿರುದ್ಧ ಕುಂಬಳೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಟೋಲ್ ವಿರುದ್ಧ ಸತ್ಯಾಗ್ರಹ ನಡೆಸುತ್ತಿದ್ದ ಕ್ರಿಯಾ ಸಮಿತಿ ಸದಸ್ಯರು ಹಾಗೂ ಕಂಡರೆ ಗುರುತಿಸಬಹುದಾದ ಸುಮಾರು 500 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವೇಳೆ ಕುಂಬಳೆಯಲ್ಲಿ ಕಣಿಪುರ ಜಾತ್ರೋತ್ಸವ ನಡೆಯುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನಸಾಗರ ಸೇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟೋಲ್ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಸಕರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘರ್ಷದ ಸಾಧ್ಯತೆಯನ್ನು ಮನಗಂಡು ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ಕುಂಬಳೆ ಪೇಟೆಯಿಂದ ಆರಂಭವಾದ ಎಡಪಂಥೀಯ ಸಂಘಟನೆಗಳ ಪ್ರತಿಭಟನೆ ಬೆಂಬಲ ಮೆರವಣಿಗೆ ಟೋಲ್ ಪ್ಲಾಝಾ ತಲುಪಿದ ನಂತರ ಟೋಲ್ ಬೂತ್ ಮೇಲೆ ಆಕ್ರಮಣ ನಡೆದಿದೆ. ಈ ವೇಳೆ ಟೋಲ್ ಬೂತ್ ಕಚೇರಿಯ ಕಿಟಕಿಗಳು, ಕ್ಯಾಮೆರಾ ಸೇರಿದಂತೆ ಹಲವು ಉಪಕರಣಗಳನ್ನು ಒಡೆದುಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.