×
Ad

ಇತಿಹಾಸ ಸೃಷ್ಟಿಸಿದ ಮಾಲೂರು ವಿಧಾನಸಭಾ ಕ್ಷೇತ್ರ ಚುನಾವಣೆ ಮರು ಎಣಿಕೆ : ಈಗ ದೇಶದ ಚಿತ್ತ ಕೋಲಾರದತ್ತ...

Update: 2025-11-11 14:49 IST

ಕೋಲಾರ : ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಎಣಿಕೆ ನಡೆಸಲಾಗುತ್ತಿದೆ. ಇಂದು ಮರು ಎಣಿಕಾ ಕಾರ್ಯ ಪ್ರಾರಂಭವಾಗಿದ್ದು, ಮರು ಎಣಿಕೆ ಫಲಿತಾಂಶ ಏನಾಗುತ್ತದೆ ಅನ್ನೋ ಕುತೂಹಲ ಇಡೀ ದೇಶವನ್ನು ಕೋಲಾರದತ್ತ ತಿರುಗಿ ನೋಡುವಂತೆ ಮಾಡಿದೆ .

ನ.10ರ ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್​ ನಲ್ಲಿ ಇವಿಎಂ ಯಂತ್ರಗಳನ್ನು ಸ್ಟ್ರಾಂಗ್ ರೂಮಿನಿಂದ ಸಮೀಪದ ತೋಟಗಾರಿಕೆ ವಿಶ್ವವಿದ್ಯಾನಿಲಯದ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಮಿಗೆ ಸಾಗಿಸಲಾಯಿತು.

ಇಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಕುತೂಹಲದಿಂದ ಕಾಯುತ್ತಿರುವ ವಿವಿಧ ಅಭ್ಯರ್ಥಿಗಳ ನೂರಾರು ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿ 75ರ ಹತ್ತಿರ ಕುಳಿತಿದ್ದಾರೆ.

ಸುಪ್ರೀಂ ಕೋರ್ಟ್​ ಆದೇಶದ ಹಿನ್ನೆಲೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಎಣಿಕೆ ಕಾರ್ಯ ನಡೆಯುತ್ತಿದೆ. ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ, ಮಾಲೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು.

ಕಳೆದ ಎರಡುವರೆ ವರ್ಷದ ಹಿಂದೆ ಚುನಾವಣೆ ನಡೆದ ನಂತರದಲ್ಲಿ ಇವಿಎಂ ಯಂತ್ರಗಳನ್ನು ಸ್ಟ್ರಾಂಗ್​ ರೂಂನಲ್ಲಿ ಸುರಕ್ಷಿತವಾಗಿರಿಸಲಾಗಿತ್ತು. ವಿವಿ ಪ್ಯಾಟ್​ ಹಾಗೂ ಇವಿಎಂ ಎಣಿಕೆ ನಡೆಯುತ್ತಿದೆ. ಎರಡೂ ಹೊಂದಾಣಿಕೆಯಾದ ನಂತರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಟಮಕದ ತೋಟಗಾರಿಕಾ ಮಹಾವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಮರು ಮತ ಎಣಿಕೆ ನಡೆಯುತ್ತಿದ್ದು, ಒಂದು ಕೊಠಡಿಯಲ್ಲಿ 14 ಟೇಬಲ್​ ಗಳನ್ನು ಹಾಕಿದ್ದು, ಎಲ್ಲಾ ಟೇಬಲ್​ ಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಇಡೀ ಕೊಠಡಿಗೆ 360 ಡಿಗ್ರಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಜೊತೆಗೆ ಮ್ಯಾನುಯಲ್​ ಕ್ಯಾಮರಾ ಮೂಲಕವೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇನ್ನು ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿದ್ದು, ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್‌​ ಮಾಡಲಾಗಿದೆ. ಮತಕೇಂದ್ರದ ಒಳಗೆ ಅಭ್ಯರ್ಥಿ ಹಾಗೂ ಅವರ ಏಜೆಂಟ್​ ಗಳನ್ನು ಹೊರತು ಪಡಿಸಿ ಬೇರೆಯಾರಿಗೂ ಪ್ರವೇಶವಿಲ್ಲ. ಇಡೀ ಕ್ಯಾಂಪಸ್​ ಅನ್ನು ಸಿಸಿಟಿವಿ ಹಾಗೂ ಪೊಲೀಸ್ ಕಣ್ಗಾವಲಿನಲ್ಲಿ ಇರಿಸಲಾಗಿದೆ.

ಒಟ್ಟಾರೆ ಇಡೀ ದೇಶದ ಗಮನ ಸೆಳೆದಿರುವ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆಯ ಫಲಿತಾಂಶ ಕೇವಲ ಜಿಲ್ಲೆಯಷ್ಟೇ ಅಲ್ಲಾ ದೇಶದಲ್ಲಿ ಸಾಕಷ್ಟು ಸದ್ದು ಮಾಡಲಿದೆ. ಹಾಗಾಗಿ ಇಂದು ನಡೆಯುವ ಮರು ಎಣೆಕೆ ಕಾರ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಈಗ ಎಲ್ಲರ ಚಿತ್ತ ಮಾಲೂರು ಮರುಎಣಿಕೆಯತ್ತ ನೆಟ್ಟಿದೆ.

ಹಿನ್ನೆಲೆ :

ಮಾಲೂರು ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಮರು ಎಣಿಕೆಗೆ ಹೈಕೋರ್ಟ್ ಆದೇಶಿಸಿತ್ತು. ನಾಲ್ಕು ವಾರಗಳಲ್ಲಿ ಮರುಎಣಿಕೆ ಕಾರ್ಯ ಮುಗಿಸುವಂತೆ ಆದೇಶ ನೀಡಿರುವ ಕೋರ್ಟ್, ಶಾಸಕ ಸ್ಥಾನದಿಂದ ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಅಸಿಂಧುಗೊಳಿಸಿತು. ಸದ್ಯ ಶಾಸಕ ನಂಜೇಗೌಡ ಪರ ವಕೀಲರ ಮನವಿ ಮೇರೆಗೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ, 30 ದಿನಗಳ ಕಾಲವಕಾಶ ನೀಡಿ ಮೇಲ್ಮನವಿಗೆ ಅವಕಾಶ ನೀಡಿತ್ತು. ಸದ್ಯ ಮರುಎಣಿಕೆ ಕೋರಿ ಕೋರ್ಟ್ ಮೊರೆ ಹೋಗಿದ್ದ ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಸಹಜವಾಗಿಯೇ ಸಂತೋಷ ಗೊಂಡಿದ್ದಾರೆ.

ಹಿಂದಿನ ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ. ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧವೂ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. 

ಮತ ಎಣಿಕೆ ದಿನ ನಡೆದಿದ್ದೇನು ? :

2023ರ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಕೋಲಾರ ನಗರದ ಕಾಲೇಜು ವೃತ್ತದಲ್ಲಿನ ಸರ್ಕಾರಿ ಬಾಲಕರ ಕಾಲೇಜಿನಲ್ಲಿ‌ ನಡೆಸಲಾಗಿತ್ತು. ಈ ವೇಳೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಲೂರು ಆರಂಭದಿಂದಲೂ ಗಮನ ಸೆಳೆದಿತ್ತು. ಕಾರಣ ಮಾಲೂರಿನಲ್ಲಿ ಪ್ರಭಲ ತ್ರಿಕೋನ ಪೈಪೋಟಿ ಇತ್ತು. ಮಾಲೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ‌ ಪ್ರಮುಖ ಮೂರು ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಂಜೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ನಡುವೆ ಪೈಪೋಟಿ ಏರ್ಪಟ್ಟಿತ್ತು, ಆದರೆ ಮಧ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಜನತಾ ಪಕ್ಷದ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಮುನ್ನಡೆ ಸಾಧಿಸಿದರು. ಈ ವೇಳೆ ಹೂಡಿ ವಿಜಯ್ ಕುಮಾರ್ ಗೆಲುವು ಬಹುತೇಕ ಖಚಿತ ಎನ್ನುವಷ್ಟರ ಮಟ್ಟಿಗೆ ಅಲ್ಲಿ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್ ಕೆಲವು ರಾಜ್ಯ ಮುಖಂಡರು ಪಕ್ಷೇತರ ಅಭ್ಯರ್ಥಿಯನ್ನು ಸಂಪರ್ಕ ಮಾಡುವ ಪ್ರಯತ್ನ ಸಹ ನಡೆಸಿದ್ದರು. ಈ ವೇಳೆ ಕೊನೆಯ ಮೂರು ಸುತ್ತು ಬಾಕಿ ಇರುವಾಗ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಗೆ ಹಿನ್ನಡೆಯಾಗಿ ಮಂಜುನಾಥಗೌಡ ಹಾಗೂ ನಂಜೇಗೌಡ ನಡುವೆ ಪೈಪೋಟಿ ಶುರುವಾಗಿತ್ತು.

ಈ ವೇಳೆ ಇನ್ನೊಂದು ಸುತ್ತು ಬಾಕಿ ಇರುವಾಗಲೇ ಮಂಜುನಾಥಗೌಡ ಪರ ಕಾರ್ಯಕರ್ತರು ವಿಜಯೋತ್ಸವದ ಮೂಡ್ ಗೆ ತೆರಳಿದ್ದರು, ಅಲ್ಲದೆ ಮತ ಎಣಿಕೆ ಕೇಂದ್ರದಿಂದ ದೂರದಲ್ಲಿದ್ದ ಮಂಜುನಾಥಗೌಡರಿಗೆ ನೀವೇ ಗೆದ್ದಿದ್ದು ಬನ್ನಿ ಎಂದು ಅವರ ಬೆಂಬಲಿಗರು ಕರೆ ಮಾಡಿದ್ದರು. ಆದರೆ, ಅವರು ಅಲ್ಲಿಗೆ ಬರುವಷ್ಟರಲ್ಲಿ ಅಲ್ಲಿನ ಚಿತ್ರಣ ಬದಲಾಗಿತ್ತು. ಕೊನೆಯ ಸುತ್ತಿನ ಎಣಿಕೆಯಲ್ಲಿ ನಂಜೇಗೌಡ ಅವರೇ 248 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ ಅನ್ನೋ‌ ಮಾಹಿತಿ ಸಿಗುತ್ತಿದ್ದಂತೆ, ಮಂಜುನಾಥಗೌಡ ಆದಿಯಾಗಿ ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು.ಅಲ್ಲಿ ಏನೋ ಗೋಲ್ ಮಾಲ್ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಈ ವೇಳೆ ಎರಡೂ ನಾಯಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಚುನಾವಣಾಧಿಕಾರಿಗಳ ಬಳಿ ಮಂಜುನಾಥಗೌಡ ಮರು ಎಣಿಕೆಗೆ ಮನವಿ‌ ಮಾಡಿದರಾದ್ರೂ ಅದಕ್ಕೆ ಅವಕಾಶ ನೀಡದೆ ಅಧಿಕಾರಿಗಳು ‌ಲಾಟರಿ ಮೂಲಕ ಎರಡೂ‌ ಐದು ಬೂತ್ ಗಳ‌ನ್ನು ಆಯ್ಕೆ ಮಾಡಿ ಅದರಲ್ಲಿ ಏನಾದರೂ ವ್ಯತ್ಯಾಸ ಬಂದಲ್ಲಿ ಮರು ಎಣಿಕೆಗೆ ಅವಕಾಶ ನೀಡುವುದಾಗಿ ತಿಳಿಸಿದರು.

ಈ ವೇಳೆ ಐದು ಬೂತ್ ಗಳನ್ನು ಎಣಿಕೆ ವೇಳೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಈ ವೇಳೆ ಮರುಎಣಿಕೆಗೆ ಅವಕಾಶ ನೀಡಲಿಲ್ಲ, ಅಂತಿಮವಾಗಿ ಚುನವಣಾಧಿಕಾರಿಯಾಗಿದ್ದ ಅಂದಿನ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಘೋಷಣೆ ಮಾಡಿದರು. ನಂತರ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್ ಮೊರೆ ಹೋಗಿ ಮರು ಎಣಿಕೆಗೆ ಮನವಿ ಮಾಡಿದ್ದರು.

ಅಂತಿಮವಾಗಿ ಅಂದು ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ :

ಕೆ.ವೈ. ನಂಜೇಗೌಡ (ಕಾಂಗ್ರೆಸ್)- 50,955

ಮಂಜುನಾಥ್ ಗೌಡ (ಬಿಜೆಪಿ)- 50707

ಹೂಡಿ ವಿಜಯ್ ಕುಮಾರ್ (ಪಕ್ಷೇತರ)- 49362

ಜಿ,ಇ ರಾಮೇಗೌಡ (ಜೆಡಿಎಸ್)- 17,627

ಗೆಲುವಿನ ಅಂತರ 248

ಇದಾದ ನಂತರ ‌ಹೈಕೋರ್ಟ್ ನಲ್ಲಿ ಎರಡು ವರ್ಷಗಳ ಕಾಲ ನಡೆದ ವಾದ ಪ್ರತಿವಾದದ ನಂತರ ಮರು ಎಣಿಕೆಗೆ ಹೈಕೋರ್ಟ್ ಆದೇಶ ನೀಡಿತು. ಕೆ.ವೈ.ನಂಜೇಗೌಡ ಮೇಲ್ಮನವಿ ಸಲ್ಲಿಸಿದ ನಂತರವೂ ಮರು ಎಣಿಕೆಗೆ ಆದೇಶ ಹೊರಡಿಸಿದೆ.

ಕೋಲಾರ ಜಿಲ್ಲಾ ಅಂದಿನ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ನಿರ್ದೇಶನ ನೀಡಿರುವ ಹೈಕೋರ್ಟ್‌, ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್‌ಡಿಸ್ಕ್ ಅನ್ನು ಮೆಸರ್ಸ್‌ ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ ನಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ.

ಒಟ್ಟಾರೆ ಮಾಲೂರು ವಿಧಾನಸಭಾ ಕ್ಷೇತ್ರದ ಮರುಎಣಿಕೆಗೆ ಆದೇಶ ಮಾಲೂರು ಕ್ಷೇತ್ರದ ಜನರಲ್ಲಿ ಮತ್ತೊಮ್ಮೆ ಕುತೂಹಲ ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News