ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವುದು ಕೇಂದ್ರ ಸರಕಾರ : ಸಿಎಂ ಸಿದ್ದರಾಮಯ್ಯ
ಕೋಲಾರ : ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವುದು ಕೇಂದ್ರ ಸರಕಾರವೇ ಹೊರತು ರಾಜ್ಯ ಸರಕಾರ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಎಸ್.ಎನ್.ಸಿಟಿಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಪುತ್ರಿ ಆರಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಬಾಗಲಕೋಟೆಯಲ್ಲಿ ಕಬ್ಬು ದರ ನಿಗದಿಗೆ ರೈತರ ಹೋರಾಟ ಮಾಡುತ್ತಿದ್ದು, ಬೆಲೆ ಏರಿಕೆಯ ಅಧಿಕಾರ ಇರುವುದು ಕೇಂದ್ರ ಸರಕಾರಕ್ಕೆ ಮಾತ್ರ. ಮಹಾರಾಷ್ಟ್ರದಲ್ಲಿ ಬೆಲೆ ಜಾಸ್ತಿ ಕೊಡುತ್ತಿದ್ದಾರೆ, ಅದಕ್ಕೆ ಸಮನಾಗಿ ರಾಜ್ಯದಲ್ಲೂ ನೀಡುವ ಬೇಡಿಕೆಯಿದೆ. ಈ ಬಗ್ಗೆ ಸಚಿವರಾದ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟಿಲ್, ತಿಮ್ಮಾಪುರ, ಎಂ.ಬಿ.ಪಾಟೀಲ್ ಅವರಿಗೆ ರೈತರೊಂದಿಗೆ ಮಾತನಾಡಲು ಹೇಳಿದ್ದೇನೆ ಎಂದರು.
ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ಜಾರಿಯ ವಿಚಾರ ಕುರಿತು ಮಾತನಾಡಿದ ಸಿಎಂ, 2 ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ ಮಾಡಲು ಪ್ರಯತ್ನ ಮಾಡುತ್ತೇವೆ. ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಅವಕಾಶ ಸಿಗಲಿದೆ ಎಂದರು.
ಕೋಲಾರ - ಬೆಂಗಳೂರು ರೈಲ್ವೆ ಯೋಜನೆಗೆ ಭೂಮಿ ನೀಡುವ ವಿಚಾರ: ರೈಲ್ವೆ ಯೋಜನೆ ಜಾರಿಗೊಳಿಸಿ ಅದರ ಲಾಭ ಪಡೆಯುವುದು ಕೇಂದ್ರ ಸರಕಾರ. ಕೇಂದ್ರಸರಕಾರಕ್ಕೆ ರಾಜ್ಯದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಕೊಡುತ್ತೇವೆ. ಆದರೆ 1 ರೂ.ನಲ್ಲಿ ನಮಗೆ ವಾಪಾಸ್ ಬರುತ್ತಿರುವುದು 14 ರಿಂದ 15 ಪೈಸೆ ಅಷ್ಟೆ. 85 ಪೈಸೆ ತೆರಿಗೆ ದುಡ್ಡು ಅವರೇ ಇಟ್ಟುಕೊಳ್ಳುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.
ಶ್ರೀನಿವಾಸಪುರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ಅಂತ ಶಾಸಕ ವೆಂಕಟಶಿವಾರೆಡ್ಡಿ ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿ, ಸಮ್ಮಿಶ್ರ ಸರಕಾರದಲ್ಲಿ ಸಿಎಂ ಇದ್ದಾಗ ಎಷ್ಟು ಕೋಟಿ ರೂ.ಅನುದಾನ ಕೊಟ್ಟಿದ್ದರು?. ರಮೇಶ್ ಕುಮಾರ್ ಶಾಸಕರಾಗಿದ್ದಾಗ ಎಷ್ಟು ಅನುದಾನ ನೀಡಿದ್ದರು. ಕೇಂದ್ರ ಸರಕಾರ ಈಗ ಆಂಧ್ರ ಹಾಗು ಬಿಹಾರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಆದರೆ ನಮಗೆ ಯಾಕೆ ನೀಡಲಿಲ್ಲ, ಇದು ತಾರತಮ್ಯ ಅಲ್ವಾ? ಎಂದು ಪ್ರಶ್ನಿಸಿದರು.
‘ಕಬ್ಬು ಬೆಳೆಗೆ ದರ ನಿಗದಿ ಸಂಪುಟ ಸಭೆಯಲ್ಲಿ ಚರ್ಚೆ’
ಕಬ್ಬ ಬೆಳೆಗೆ ದರ ನಿಗದಿ ಮಾಡುವ ವಿಚಾರ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ನ.6ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಸಕ್ಕರೆ ಸಚಿವರು ಸೇರಿದಂತೆ ಆ ಭಾಗದ ಸಚಿವರು ಕೂಡ ಚರ್ಚೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಿರ್ಧಾರ ಕೈಗೊಂಡರೂ ಕೇಂದ್ರ ಸರಕಾರವೇ ಕಬ್ಬಿನ ದರ ನಿಗದಿಪಡಿಸಬೇಕಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಬುಧವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.