ಕುಕನೂರು ತಾಲೂಕಿನಲ್ಲಿ ಕಾರ್ಮಿಕರ ಮಕ್ಕಳಿಗಾಗಿ ನೂತನ ವಸತಿ ಶಾಲೆಗೆ ಅನುಮೋದನೆ
ಕುಕನೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿಯೇ ಕುಕನೂರು ತಾಲೂಕಿನಲ್ಲಿ ನೂತನ ವಸತಿ ಶಾಲೆ ಪ್ರಾರಂಭವಾಗಲಿದೆ.
ತಾಲೂಕಿನ ಮಸಬ ಹಂಚಿನಾಳ ಹತ್ತಿರ ಸುಮಾರು 10 ಎಕರೆ ಪ್ರದೇಶದಲ್ಲಿ ಕಾರ್ಮಿಕ ಮಕ್ಕಳ ವಸತಿ ಶಾಲೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಈ ಕುರಿತಂತೆ ರಾಜ್ಯ ಸರ್ಕಾರದ ಅದೀನ ಕಾರ್ಯದರ್ಶಿಗಳು ಟೆಂಡರ್ ಪ್ರಕ್ರಿಯೆ ಕುರಿತಂತೆ ಆಗತ್ಯ ಕ್ರಮಗಳನ್ನು ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ.
ಕಾರ್ಮಿಕರ ಮಕ್ಕಳ ವಸತಿ ಶಾಲೆಯ ಕಟ್ಟಡಕ್ಕಾಗಿ ಸುಮಾರು 37 ಕೋಟಿ ರೂ. ಅನುದಾನ ಮಂಜೂರಾತಿ ದೊರೆತಿದ್ದು, 6 ರಿಂದ 12ನೇ ತರಗತಿವರೆಗೂ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ದೊರೆಯಲಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಮಿಕ ಮಕ್ಕಳಿಗೆ ಸುಮಾರು 750 ಕೋಟಿ ರೂ. ವೆಚ್ಚಗಳಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಅದರಂತೆ ಕುಕನೂರು ತಾಲೂಕಿನ ತಾಳಬಾಳ್ ಗ್ರಾಮದ ಹತ್ತಿರದ ಸರ್ಕಾರಿ ಜಮೀನಿನಲ್ಲಿ 83,073 ಚರದ ಅಡಿ ಅಳತೆಯಲ್ಲಿ ಈ ವಸತಿ ಶಾಲೆ ನಿರ್ಮಾಣವಾಗಲಿದೆ. ಈ ಕಟ್ಟಡದಲ್ಲಿ ಬಾಲಕ, ಬಾಲಕಿಯರ ಭೋಜನಾಯ, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾಚಟುವಟಿಕೆ ಗಳ ಕೊಠಡಿ, ಸಿಬ್ಬಂದಿಗಳ ಕೊಠಡಿಗಳನ್ನು ಹೊಂದಿರುತ್ತದೆ.
ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಅವರು ಶಿಕ್ಷಣ ಕ್ಷೇತ್ರ ಸೇರಿ ತಾಲೂಕಿನ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುತ್ತಿದ್ದು, ಶಾಸಕರ ಜನಪರ ಕಾಳಜಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಸ್ಮರಿಸಿದ್ದಾರೆ.