ಅ.6ರಂದು ಕೊಪ್ಪಳದಲ್ಲಿ 1,128 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ : ಶಾಸಕ ಡಾ.ಅಜಯ್ ಧರ್ಮಸಿಂಗ್
ಡಾ.ಅಜಯ್ ಸಿಂಗ್
ಕೊಪ್ಪಳ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹನುಮಂತನ ಜನ್ಮಭೂಮಿಯಾದ ಕೊಪ್ಪಳದಲ್ಲಿ 1,128 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭ ಅ.6ರಂದು (ಸೋಮವಾರ) ನಡೆಯಲಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕರಾದ ಡಾ.ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಆರೋಗ್ಯ, ಶಿಕ್ಷಣ, ಹಿಂದುಳಿದ ವರ್ಗಗಳು, ನೀರಾವರಿ ಸೇರಿದಂತೆ ಹಲವಾರು ಇಲಾಖೆಗಳ ಯೋಜನೆಗಳಿಗೆ ಸಹಕಾರ ನೀಡುವ ಮೂಲಕ ಕೆಕೆಆರ್‌ಡಿಬಿ ಕೊಪ್ಪಳದಲ್ಲಿ ಅಭಿವೃದ್ಧಿಯ ಹೊಸ ಪರ್ವಕ್ಕೆ ಮುನ್ನುಡಿ ಬರೆದಿದೆ . ಕೊಪ್ಪಳ ನಗರದಲ್ಲಿರುವ ಅಗಡಿ ಬಡಾವಣೆಯಲ್ಲಿ ಅಕ್ಟೋಬರ್ 6ರಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರ ಹಾಗೂ ಕೆಕೆಆರ್‌ಡಿಬಿ ಸಹಯೋಗದಲ್ಲಿ 1,128 ಕೋಟಿ ರೂ. ಮೊತ್ತದ ಪ್ರಗತಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಯೋಜನಾ ಸಚಿವ ಸುದಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಕಲ್ಯಾಣ ನಾಡಿನ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು, ವಿವಿಧ ಇಲಾಖೆ ಸಚಿವರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೆಕೆಆರ್‌ಡಿಬಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದಲ್ಲಿ ಕಲ್ಯಾಣ ನಾಡಿನ ಏಳು ಜಿಲ್ಲೆಗಳಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಮುಂಬರುವ ದಿನಗಳಲ್ಲಿ ಚಾಲನೆ ನೀಡಲಾಗುತ್ತದೆ. ಒಟ್ಟು 306 ಕೋಟಿ ರೂ. ವೆಚ್ಚದಲ್ಲಿ 36 ಹೊಸ ವಸತಿ ನಿಲಯಗಳಿಗೆ ಅಡಿಗಲ್ಲು ಇಡಲಾಗುತ್ತಿದ್ದು, 20 ಹೊಸ ವಸತಿ ನಿಲಯಗಳಿಗೆ ಅನುಮೋದನೆ ನೀಡಲಾಗಿದೆ. ಇರುವ ವಸತಿ ನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗೂ ಚಾಲನೆ ದೊರಕಲಿದೆ ಎಂದರು.
ಕೊಪ್ಪಳದಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಕೋಟಿ ರೂ. ವೆಚ್ಚದ 100 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ ಕೆಕೆಆರ್‌ಡಿಬಿ 34 ಕೋಟಿ ರೂ. ಅನುದಾನ ನೀಡಿದೆ. ಹನುಮಂತ ದೇವರ ಜನ್ಮಭೂಮಿಯಾದ ಕೊಪ್ಪಳ ಜಿಲ್ಲೆಗೆ ಕೆಕೆಆರ್‌ಡಿಬಿ ವಿಶೇಷ ಆದ್ಯತೆ ನೀಡಿದ್ದು, ಕಲ್ಯಾಣ ನಾಡಿನ ಹಿಂದುಳಿದ ವರ್ಗಗಳ ಕಲ್ಯಾಣ ಕ್ರಾಂತಿಯ ಪ್ರಾರಂಭ ಸ್ಥಳವಾಗಿಯೂ ಕೊಪ್ಪಳವನ್ನೇ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ಧಾರೆ.
ಕೊಪ್ಪಳ ಜಿಲ್ಲೆಗೆ ಈಗಾಗಲೇ ಕೆಕೆಆರ್‌ಡಿಬಿಯಿಂದ ಆರೋಗ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಹಾಗೂ ಎಸ್ಸಿ-ಎಸ್ಟಿ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುದಾನ ಒದಗಿಸಲಾಗಿದೆ. ಕುಕನೂರ ತಾಲ್ಲೂಕಿನ ತಳಕಲ್‌ನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಡಿ ಜಿಟಿಟಿಸಿ ಬಹುಕೌಶಲ್ಯ ಕೇಂದ್ರಕ್ಕೂ ಕೆಕೆಆರ್‌ಡಿಬಿ ಸಹಯೋಗ ನೀಡಿದೆ.
ಕೊಪ್ಪಳದ ಅಭಿವೃದ್ಧಿಯ ಹಲವು ಯೋಜನೆಗಳಿಗೆ ಕೆಕೆಆರ್‌ಡಿಬಿ ತನ್ನ ಸಹಾಯ ವಿಸ್ತರಿಸಿದೆ ಎಂದು ಮಂಡಳಿಯ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.