ಹೊಸಪೇಟೆ | ಗಾದಿಗನೂರಿನಲ್ಲಿ ‘ಸ್ವಾಸ್ಥ ನಾರಿ, ಸಶಕ್ತ ಪರಿವಾರ’ ಅಭಿಯಾನಕ್ಕೆ ಚಾಲನೆ
ಹೊಸಪೇಟೆ : ತಾಲ್ಲೂಕಿನ ಗಾದಿಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಸ್ವಾಸ್ಥ ನಾರಿ, ಸಶಕ್ತ ಪರಿವಾರ’ ಅಭಿಯಾನಕ್ಕೆ ವೈದ್ಯೆ ಡಾ.ದಿವ್ಯಾಶ್ರೀ ಬುಧವಾರ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಒತ್ತಡದ ಬದುಕಿನಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿರುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ಆರಂಭಿಸಲಾಗಿದೆ ಎಂದರು.
ಮಹಿಳೆಯರಿಗೆ ಉಚಿತ ವೈದ್ಯಕೀಯ ಪರೀಕ್ಷೆ ಹಾಗೂ ಆರೋಗ್ಯ ಸೇವೆಗಳಾದ ಕಿವಿ, ಕಣ್ಣು, ಮೂಗು ಮತ್ತು ಗಂಟಲು, ರಕ್ತದೊತ್ತಡ, ಕ್ಯಾನ್ಸರ್ (ಬಾಯಿ, ಸ್ತನ, ಗರ್ಭಾಶಯ), ಲಸಿಕೆ, ರಕ್ತಹೀನತೆ ಹಾಗೂ ಕ್ಷಯರೋಗ ಪರೀಕ್ಷೆಗಳ ಸೌಲಭ್ಯ ಲಭ್ಯವಿದೆ. ಆರೋಗ್ಯವಂತ ಮಹಿಳೆ ಇಡೀ ಕುಟುಂಬದ ಆರೋಗ್ಯದ ಆಧಾರವಾಗಿರುವುದರಿಂದ ಈ ಅಭಿಯಾನ ಅತ್ಯಂತ ಮಹತ್ವದ್ದಾಗಿದೆ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡಮನಿ ಮಾತನಾಡಿ, ಅಭಿಯಾನವು ಅನೇಕ ಆರೋಗ್ಯ ಸೇವೆಗಳ ಪ್ರವೇಶ ಸುಲಭಗೊಳಿಸುವ ಜೊತೆಗೆ ತಾಯಿ ಮತ್ತು ಮಗು ರಕ್ಷಣೆ ಕಾರ್ಡ್, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ನೋಂದಣಿ, ಅಂಗದಾನ-ರಕ್ತದಾನ ಶಿಬಿರ, ಋತುಚಕ್ರ ಸ್ವಚ್ಛತೆ ಹಾಗೂ ಪೌಷ್ಟಿಕಾಂಶದ ಅರಿವು ಮೂಡಿಸುವುದಕ್ಕೂ ನೆರವಾಗುತ್ತದೆ. ಈ ಸೇವೆಗಳನ್ನು ಪಡೆಯಲು ಮಹಿಳೆಯರು ಹಾಗೂ ಮಕ್ಕಳು ತಮ್ಮ ಹತ್ತಿರದ ಆಯುಷ್ಮಾನ್ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯ ಮಹಿಳೆಯರು ಹಾಜರಿದ್ದರು.