ಕನಕಗಿರಿ | ದಲಿತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ : ಕಠಿಣ ಶಿಕ್ಷೆಗೆ ಆಗ್ರಹಿಸಿ ಮನವಿ
ಕನಕಗಿರಿ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬನೋಸಿ ಗ್ರಾಮದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ವೆಂಕಟೇಶ ಆಗ್ರಹಿಸಿದ್ದಾರೆ.
ಈ ಕುರಿತು ತಹಶೀಲ್ದಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವುದು ಹೇಯ ಕೃತ್ಯವಾಗಿದೆ, ಸ್ವಾತಂತ್ರ್ಯ ಗಳಿಸಿ 78 ವರ್ಷ ಗತಿಸಿದರೂ ಅಮಾಯಕ ದಲಿತ ಸಮಾಜದವರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ, ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಶಿಕ್ಷಣ ಪಡೆದು ಸುಂದರ ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಬಾಲಕಿಯ ಕುಟುಂಬಕ್ಕೆ ದಿಕ್ಕುದೋಚದಾಗಿದೆ. ಕೊಲೆಗೆ ಒಳಗಾಗಿರುವ ಬಾಲಕಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, 25 ಲಕ್ಷ ರೂಪಾಯಿ ಪರಿಹಾರ ವಿತರಿಸಬೇಕು, ನಾಲ್ಕು ಎಕರೆ ಭೂಮಿ ನೀಡಬೇಕು, ಎಲ್ಲಾ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ದುರಗಪ್ಪ ದೊಡ್ಡಮನಿ, ಪಂಪಾಪತಿ ಜಾಲಿಹಾಳ, ಪ್ರಮುಖರಾದ ಕೃಷ್ಣಪ್ಪ, ಅಕ್ಕಿರೊಟ್ಟಿ, ಯಮನೂರ, ಮಾರುತಿ ದೊಡ್ಡಮನಿ , ಲಕ್ಷ್ಮಣ ನಾಯಕ್, ರಮೇಶ ಇತರರು ಇದ್ದರು.