ಕನಕಗಿರಿ |ಯೋಗಾಸನ ಸ್ಪರ್ಧೆ : ಅಂಬೇಡ್ಕರ್ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್
ಕನಕಗಿರಿ: ಗಂಗಾವತಿಯಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕಿನ ಸಿರವಾರ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯ 10 ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ ಶಿಪ್ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
12 ವರ್ಷದೊಳಗಿನ ಬಾಲಕರ ವಿಭಾಗಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ ದುರುಗಪ್ಪ, ಕಲಾತ್ಮಕ ಸಿಂಗಲ್ಸ್ ಯೋಗಾಸನ ಸ್ಪರ್ಧೆಯಲ್ಲಿ ಅಶೋಕ ತಳವಾರ ಮತ್ತು ಕಲಾತ್ಮಕ ಯೋಗಾಸನ ಜೋಡಿ ಸ್ಪರ್ಧೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಹನುಮನಗೌಡ ಹಾಗೂ ಸಂತೋಷ ಗೌಡ ಆಯ್ಕೆಯಾಗಿದ್ದಾರೆ.
12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ 10ನೇ ತರಗತಿಯ ರತ್ನಾದೇವಿ, ಕಲಾತ್ಮಕ ಯೋಗಾಸನ ಸಿಂಗಲ್ಸ್ ಸ್ಪರ್ಧೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಸಿಂಧೂ, ಕಲಾತ್ಮಕ ಯೋಗಾಸನ ಜೋಡಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯರಾದ ಪವಿತ್ರ, ಸೌಮ್ಯ ಹಾಗೂ 14 ವರ್ಷದೊಳಗಿನ ಕಲಾತ್ಮಕ ಜೋಡಿ ಸ್ಪರ್ಧೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿಯರಾದ ಲಕ್ಷ್ಮಿ ಬಸರಿಹಾಳ ಮತ್ತು ಕನ್ವಿಕಾ ರಾಣಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಾ.ಪರಶುರಾಮ ಎ.ಕೆ. ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲ ಶೇಖಪ್ಪ ಅರಷಣಗಿ, ನಿಲಯ ಪಾಲಕ ಶರಣಪ್ಪ, ಸಿಬ್ಬಂದಿ ಝಾಕೀರ ಹುಸೇನ ನದಾಫ, ಬಾಬರ್‌ಪಾಷಾ, ಶೇಖ್ ಫಾರೂಕ್, ಪರಶುರಾಮ, ಎಚ್. ಕನಕರಾಯ ಡಗ್ಗಿ, ಹುಲಿಗೆಮ್ಮ ಡಗ್ಗಿ, ಸುಜಾತ, ಗಾಯಿತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.