ಅ.18 ರಂದು ಪ್ರವಾದಿಯವರ ಜನ್ಮದಿನದ ಪ್ರಯುಕ್ತ ವಿಶ್ವ ಶಾಂತಿ ಸಂದೇಶ ಸಮಾರಂಭ : ಸಲೀಂ ಅಹ್ಮದ್
ಕೊಪ್ಪಳ : ಪ್ರವಾದಿ ಮುಹಮ್ಮದ್ ಅವರ 1,500ನೇ ಜಯಂತಿಯ ಪ್ರಯುಕ್ತ ಕೊಪ್ಪಳ ನಗರದ ಪಬ್ಲಿಕ್ ಗ್ರೌಂಡ್‌ನಲ್ಲಿ ಅ.18 ರಂದು ವಿಶ್ವ ಶಾಂತಿ ಸಂದೇಶ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಹೇಳಿದರು.
ನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶಾಸಕರು, ಸಂಸದರು ಹಾಗೂ ರಾಜ್ಯದ ಹಲವು ಭಾಗಗಳಿಂದ ಜನರು ಭಾಗವಹಿಸಲಿದ್ದಾರೆ. ಧರ್ಮಗುರುಗಳು ಹಾಗೂ ಮಠಾಧೀಶರು ಭಾಗವಹಿಸುವ ಈ ಸಮಾರಂಭದಿಂದ ಭಾವೈಕತೆಯ ಸಂದೇಶ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.
ಪ್ರತಾಪ್ ಸಿಂಹ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಜನರು ಅವರಿಗೆ ಕಪಾಳ ಮೋಕ್ಷ ಮಾಡಿ ಶಾಸಕರ ಸಂಖ್ಯೆಯನ್ನು 70ಕ್ಕೆ ಇಳಿಸಿದ್ದಾರೆ, ನಾವು ಎರಡೂವರೆ ವರ್ಷದಿಂದ ಪ್ರಮಾಣಿಕವಾಗಿ ಕೆಲಸಮಾಡುತ್ತಿದ್ದೇವೆ. ನುಡಿದಂತೆ ನಡೆದಿದ್ದೇವೆ, 40 ಪರ್ಸೆಂಟ್ ಕಮಿಷನ್ ಮತ್ತು ಕೊರೊನಾ ಹಗರಣದಂತಹ ಹಗರಣಗಳಿಂದ ಜನರು ನಮಗೆ ಅಧಿಕಾರ ಕೊಟ್ಟು ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ ಎಂದರು.
ಸಂಪುಟ ಪುನರ್‌ರಚನೆ ಕುರಿತು ಮಾತನಾಡಿ, ಬಿಹಾರ ಚುನಾವಣೆಯ ನಂತರ ಸಂಪುಟ ಪುನರ್‌ರಚನೆಯಾಗುವ ಸಾಧ್ಯತೆ ಇದೆ. ಕೆಲ ಸಚಿವರನ್ನು ಪಕ್ಷ ಸಂಘಟನೆಗೆ ಕಳುಹಿಸಿ ಹೊಸ ಮುಖಗಳಿಗೆ ಅವಕಾಶ ನೀಡುವ ಯೋಜನೆ ಇದೆ ಎಂದು ಹೇಳಿದರು. ತಾನು ಮಂತ್ರಿಯಾಗದಿದ್ದರೂ ಪಕ್ಷದ ನಿಷ್ಠೆಯಿಂದ ದುಡಿಯುತ್ತಿದ್ದೇನೆ, ಮುಂದಿನ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದರು.
ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಗೆ ಉತ್ತರಿಸುತ್ತಾ, ಇದಕ್ಕೆ ಉತ್ತರಿಸುವ ಅಧಿಕಾರ ಪಕ್ಷದ ವರಿಷ್ಠರಿಗೆ ಮಾತ್ರ ಇದೆ. ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಇಕ್ಬಾಲ್ ಅನ್ಸಾರಿ ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬ್ಯಾಡ್ ಲಕ್‌ನಿಂದ ಅವರು ಸೋತಿದ್ದಾರೆ. ಗೆದಿದ್ದರೆ ಅವರಿಗೆ ಹೆಚ್ಚು ಹೆಚ್ಚು ಅವಕಾಶ ಸಿಗುತ್ತಿದ್ದವು. ನಾವು ಪಕ್ಷದ ಸಿದ್ಧಾಂತಗಳಿಗಾಗಿ ಕೆಲಸ ಮಾಡುತ್ತಿದ್ದೇವೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ನವೆಂಬರ್ ಕ್ರಾಂತಿ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಕ್ರಾಂತಿ ಇಲ್ಲ, ಆದರೆ ಬಿಜೆಪಿಯಲ್ಲಿ ಕ್ರಾಂತಿ ಸಂಭವಿಸುವ ಸಾಧ್ಯತೆ ಇದೆ. 75 ವರ್ಷವಾದವರು ಅಧಿಕಾರ ಬಿಡಬೇಕು ಎಂಬ ಮೋಹನ್ ಭಾಗವತ್ ಅವರ ಹೇಳಿಕೆಯೇ ಆ ಕ್ರಾಂತಿ ಎಂದರು.
ಮತಗಳ್ಳತನದ ಬಗ್ಗೆ ಮಾತನಾಡಿ, ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸುಮಾರು ನೂರು ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲೇ ಒಂದು ಲಕ್ಷ ಮತಗಳನ್ನು ಕಳ್ಳತನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಕಾಡ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ್, ಕೆ.ಎಂ.ಸೈಯದ್, ವಕೀಲ ಆಸಿಫ್ ಅಲಿ, ಮುಫ್ತಿ ನಜೀರ್ ಅಹ್ಮದ್, ಅಕ್ಬರ್ ಬಾಷಾ ಪಲ್ಟನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.