×
Ad

ಸಿ.ಟಿ.ರವಿ ತಕ್ಷಣ ಕ್ಷಮೆ ಕೇಳಿದ್ದರೆ ಗೌರವ ಉಳಿಯುತ್ತಿತ್ತು : ಚಲುವರಾಯಸ್ವಾಮಿ

Update: 2024-12-24 20:08 IST

ಎನ್.ಚಲುವರಾಯಸ್ವಾಮಿ

ಮಂಡ್ಯ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಬಗ್ಗೆ ತಕ್ಷಣವೇ ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಅವರ ಗೌರವ ಉಳಿದುಕೊಳ್ಳುತ್ತಿತ್ತು. ಆದರೆ, ಬದಲಾಗಿ ಮೊಂಡು ವಾದ ಮಾಡುವುದಕ್ಕೆ ನಿಂತಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼಮಾತನಾಡಿರುವುದನ್ನು ಸುಳ್ಳು ಮಾಡುವುದಕ್ಕೆ ಸಾಧ್ಯವಿಲ್ಲ. ಅವರ ಪದ ಬಳಕೆ ಮಾಡಿರುವ ವಿಚಾರ ಎಲ್ಲ ಸದಸ್ಯರಿಗೂ ಗೊತ್ತು. ಅವರ(ಬಿಜೆಪಿ) ಪಕ್ಷದ ಹಿರಿಯ ನಾಯಕರೇ ರವಿ ಹಾಗೇ ಮಾತನಾಡಬಾರದಿತ್ತು ಎಂದು ನನ್ನ ಜತೆ ಹೇಳಿದ್ದಾರೆ. ಹಿರಿಯ ಮುಖಂಡರಾಗಿ ರವಿ ಮಾಡಿರುವುದು ಮಹಾ ಅಪರಾಧʼ ಎಂದರು.

ʼಸಿ.ಟಿ.ರವಿ ತಾನು ಕೆಟ್ಟ ಪದ ಬಳಕೆ ಮಾಡಿಲ್ಲವೆಂದು ವಾದವನ್ನೇ ಮುಂದುವರಿಸುವುದಾದರೆ, ನೊಂದ ಹೆಣ್ಣು ಮಗಳಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಹ್ವಾನವನ್ನು ಸ್ವೀಕರಿಸಿ ಧರ್ಮಸ್ಥಳ ಮಂಜುನಾಥನ ಮುಂದೆ ಆಣೆ ಪ್ರಮಾಣ ಮಾಡಲಿʼ ಎಂದು ಚಲುವರಾಯಸ್ವಾಮಿ ಸವಾಲು ಹಾಕಿದರು.

ʼಎನ್‍ಕೌಂಟರ್ ಮಾಡುವ ವಿಚಾರವೇ ಇದು? ಜವಾಬ್ಧಾರಿಯುತ ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಶಿ ಆರೋಪ ಅರ್ಥವಿಲ್ಲದ್ದು. ಅವರ ಹತ್ತಿರ ಅನೇಕ ಏಜೆನ್ಸಿಗಳಿವೆಯಲ್ಲ ತನಿಖೆ ಮಾಡಿಸಲಿ. ಬಿಜೆಪಿ, ಜೆಡಿಎಸ್‍ನವರು ಇರುವುದೇ ಆರೋಪ ಮಾಡುವುದಕ್ಕೆ. ನಿರಂತರ ಆರೋಪಗಳಿಂದ ತಮ್ಮ ತಪ್ಪು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆʼ ಎಂದು ಅವರು ತಿರುಗೇಟು ನೀಡಿದರು.

ʼನಮ್ಮ ಸರಕಾರ ಬಂದಾಗಿನಿಂದಲೂ ಅಸ್ಥಿರಗೊಳಿಸುವ ಯತ್ನ ಮಾಡುತ್ತಲೇ ಇದ್ದಾರೆ. ಯಾವುದಾದರೊಂದು ವಿಷಯ ಇಟ್ಟುಕೊಂಡು ತಮ್ಮ ಯತ್ನ ಮುಂದುವರಿಸಿದ್ದಾರೆ. ಈ ನಡುವೆ ನಮ್ಮ ಸರಕಾರ ನುಡಿದಂತೆ ಜನಪರ ಕೆಲಸ ಮಾಡುತ್ತಿದೆ. ಮೂರು ಉಪ ಚುನಾವಣೆ ಗೆದ್ದರೂ ಅವರಿಗೆ ಬುದ್ದಿ ಬಂದಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುವುದು ಬಿಟ್ಟು ಸರಕಾರಕ್ಕೆ ಸಲಹೆ, ಮಾರ್ಗದರ್ಶನ ನೀಡಲಿʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News