×
Ad

ಕಾಂಗ್ರೆಸ್‍ ಸಿದ್ದಾಂತವನ್ನು ಒಪ್ಪಿ ಯಾರೇ ಬಂದರೂ ಮುಕ್ತ ಅವಕಾಶ ಇದೆ : ಚಲುವರಾಯಸ್ವಾಮಿ

Update: 2025-03-01 19:44 IST

ಎನ್.ಚಲುವರಾಯಸ್ವಾಮಿ

ಮಂಡ್ಯ : ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಯಾರೇ ಬಂದರೂ ಮುಕ್ತ ಅವಕಾಶ ಇದೆ. ಆದರೆ, ನಾವು ಯಾರಿಗೂ ಆಹ್ವಾನ ನೀಡುವುದಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್‍ನ ಹಲವಾರು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆಂಬ ಸಚಿವ ಝಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ಗೆ ಬರುವವರನ್ನು ಸ್ವಾಗತಿಸುವುದಾಗಿ ಸಿಎಂ, ಡಿಸಿಎಂ ಅವರೂ ಹೇಳಿದ್ದಾರೆ ಎಂದರು.

ಉನ್ನತ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಏಕೆ ಹೋಗುತ್ತಾರೆ? ಬಿಜೆಪಿಯವರಿಗೆ ಸಮರ್ಥ ನಾಯಕನ ಕೊರತೆ ಇದೆ. ಹಾಗಾಗಿ ಶಿವಕುಮಾರ್ ತಮ್ಮ ಪಕ್ಷಕ್ಕೆ ಬರಲಿದ್ದಾರೆಂದು ಕನಸು ಕಾಣುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಮಂಡ್ಯ ವಿವಿ ಇರಬೇಕೆ? ಬೇಡವೆ? ಎಂಬುದನ್ನು ಸಚಿವ ಸಂಪುಟದ ಉಪಸಮಿತಿ ವರದಿ ನಂತರ ತೀರ್ಮಾನಿಸುತ್ತೇವೆ. ವಿವಿಗಳನ್ನು ಸ್ಥಾಪಿಸುವುದು ದೊಡ್ಡದಲ್ಲ, ಅವುಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಿತ್ತಲ್ಲವೇ? ಎಂದು ಅವರು ಬಿಜೆಪಿಯವರಿಗೆ ತಿರುಗೇಟು ನೀಡಿದರು.

ಮಂಡ್ಯ ಡಿಸಿಸಿ ಬ್ಯಾಂಕ್‍ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಂದೇ ಒಂದು ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇನೆ. ಸ್ಥಳೀಯ ಶಾಸಕರು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಜತೆ ಚರ್ಚಿಸಿ ಪಿಎಸ್‍ಎಸ್‍ಕೆ ಕಾರ್ಮಿಕರ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಹೇಮಾವತಿ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ನೀಡುತ್ತಿರಲಿಲ್ಲ. ಮಾ.3ರಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಿ ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೆ ನಾಲೆಗಳಿಗೆ ಒಂದು ತಿಂಗಳು ನೀರುಹರಿಸಲಾಗುವುದು ಎಂದು ಚಲುವರಾಯಸ್ವಾಮಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News