ಮಂಡ್ಯ| ಮಹಿಳೆಯ ಹತ್ಯೆಗೈದು ಚಿನ್ನಾಭರಣ ದೋಚಿದ ಪ್ರಕರಣ: ದಂಪತಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
ಮಂಡ್ಯ: ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ದಂಪತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ತಮಿಳುನಾಡಿನ ಕೈಮತ್ತೂರು ಜಿಲ್ಲೆಯ ಪೆರಿಯನಾಯಕನಪಾಳ್ಯ ಗ್ರಾಮದ ಆನಂದ ಮತ್ತು ಆತನ ಪತ್ನಿ ಆನಂದಿ ಶಿಕ್ಷೆಗೆ ಗುರಿಯಾದವರು. ಇವರು ತಮ್ಮದೇ ಗ್ರಾಮದ ರಜಾತಿ ಅಲಿಯಾಸ್ ಆರೋಗ್ಯ ಮೇರಿ ಅವರನ್ನು ಕೊಲೆ ಮಾಡಿದ್ದ ಆರೋಪ ಹೊತ್ತಿದ್ದರು.
ಪ್ರಕರಣದ ಹಿನ್ನೆಲೆ:
ತಮ್ಮದೇ ಗ್ರಾಮದ ನಿವಾಸಿ ರಜಾತಿ ಅಲಿಯಾಸ್ ಆರೋಗ್ಯ ಮೇರಿಯನ್ನು ಆನಂದ ಮತ್ತು ಆನಂದಿ ದಿನಾಂಕ 26-05-2012ರಂದು ಕರ್ನಾಟಕದ ಕಬ್ಬಾಳಮ್ಮ ದೇವಾಸ್ಥಾನಕ್ಕೆ ಜತೆಯಲ್ಲಿ ಕರೆದುಕೊಂಡು ಬಂದಿದ್ದರು.
ಮಾರ್ಗಮಧ್ಯೆ ರಜಾತಿಗೆ ಮದ್ಯಪಾನ ಮಾಡಿಸಿಕೊಂಡು ಮಳವಳ್ಳಿ ತಾಲ್ಲಕಿನ ಧನಗೂರು ಕುರಿ ಫಾರಂ ಕಡೆಗೆ ಹೋಗುವ ರಸ್ತೆಯಲ್ಲಿರುವ ನೀಲಗಿರಿ ಮರಗಳ ಜಮೀನಿಗೆ ಬಂದು ಆಕೆ ಮಲಗಿದ್ದಾಗ ಉಸಿರುಗಟ್ಟಿಸಿ ಸಾಯಿಸಿ ಆಕೆಯ ಮೇಮೇಲಿದ್ದ ಚಿನ್ನಾಭರಗಣಗಳನ್ನು ದಂಪತಿ ದೋಚಿದ್ದರು.
ಈ ಸಂಬಂಧ ರಜಾತಿ ಪತಿ ತಿರುಮಲೈಸ್ವಾಮಿ ಆನಂದ, ಆನಂದಿ ವಿರುದ್ಧ ಮಳವಳ್ಳಿ ತಾಲೂಕು ಹಲಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಕೆ.ಎಂ.ದೊಡ್ಡಿ ವೃತ್ತ ನಿರೀಕ್ಷಕರಾಗಿದ್ದ ಹಾಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಎಸ್.ಇ.ಗಂಗಾಧರಸ್ವಾಮಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ವಾದ ಪ್ರತಿವಾದದ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಅವರು ಆರೋಪಿಗಳಿಗೆ ಜು.16ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಜನೆ ಪರವಾಗಿ ಸರಕಾರಿ ಅಭಿಯೋಜಕರಾದ ವೆಂಕಟಲಕ್ಷ್ಮಮ್ಮ ಜಿ. ವಾದ ಮಂಡಿಸಿದ್ದರು ಎಂದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.