ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಕನಸು : ಎಚ್‌ಡಿಕೆ ವ್ಯಂಗ್ಯ
ಡಿ.ಕೆ.ಶಿವಕುಮಾರ್
ಮಂಡ್ಯ : ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಬರೀ ಕನಸು ಅಷ್ಟೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರದ ಸಾರಿಗೆ ಬಸ್ ನಿಲ್ದಾಣದ ಎದುರು ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ರವಿವಾರ ಭೂಮಿಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಡಿಕೆಶಿ ಸಿಎಂ ಆಗಲು ಏನಿದ್ದರೂ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡ್ತಾರೆ ಎಂಬುದನ್ನು ನೋಡೋಣ. ನಮ್ಮ ಕೈಯಲ್ಲಿ ಏನು ಇಲ್ಲ, ಎಲ್ಲಾ ಭಗವಂತನ ಕೈಯಲ್ಲಿ ಇದೆ. ಏನಾಗುತ್ತದೋ ಎಂದು ಅವರು ಹೇಳಿದರು.
2013ರಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆಯಲ್ಲಿ ಈಗಾಗಲೇ 14ರಿಂದ 15 ಸಾವಿರ ಕೋಟಿ ಲೂಟಿ ಆಗಿದೆ. 2027ಕ್ಕೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನೂ ಆ ನೀರು ಕಾಡುಮನೆ ಎಸ್ಟೇಟ್‌ನಿಂದ ಮುಂದಕ್ಕೆ ಬಂದೇ ಇಲ್ಲ ಎಂದು ಅವರು ಟೀಕಿಸಿದರು.
ಎತ್ತಿನಹೊಳೆ ನೀರು ಕೊಡ್ತೀವಿ ಎಂದು ಹೇಳಿದವರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅಲ್ಲಿನ ರೈತರು ಬೆಳೆಯುವ ತರಕಾರಿಯನ್ನೂ ಯಾರು ಕೊಳ್ಳಬಾರದಂತೆ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಅಕ್ರಮಗಳ ಬಗ್ಗೆ ಆಶ್ಚರ್ಯ ಪಡಬೇಕಾಗಿಲ್ಲ :
ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಆಶ್ಚರ್ಯ ಪಡಬೇಕಾಗಿಲ್ಲ.ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಇದು ಎಲ್ಲ ಇಲಾಖೆಯಲ್ಲೂ ನಡೆಯುತ್ತಿದೆ. ಈ ಸರಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆ ಬರುವವರೆಗೆ ಕಾಯಬೇಕು ಎಂದು ಅವರು ಪ್ರತಿಕ್ರಿಯಿಸಿದರು.
ಎರಡು ವರ್ಷದಿಂದ ಅವರು ಏನು ಮಾಡುತ್ತಿದ್ದರು? :
ಅಕ್ರಮ ಗಣಿಗಾರಿಕೆಯಿಂದ ಒಂದುವರೆ ಲಕ್ಷ ಕೋಟಿ ಹಣ ವಸೂಲಿ ಮಾಡಬೇಕಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಎರಡು ವರ್ಷದಿಂದ ಅವರು ಏನು ಮಾಡುತ್ತಿದ್ದರು? ವಸತಿ ಇಲಾಖೆಯಲ್ಲಿ ಕೇಳಿ ಬರುತ್ತಿರುವ ಆಕ್ರಮಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಈ ಪತ್ರವನ್ನು ತೇಲಿ ಬಿಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮಂಡ್ಯ ಜಿಲ್ಲೆಗೆ 40 ಕೋಟಿ ರೂ. ಅಂದಾಜು ವೆಚ್ಚದ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದ್ದೇನೆ. ಪ್ರತಿ ಪಂಚಾಯತ್ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ ಮಾಡಬೇಕು ಎಂಬುದು ಕಳಸಿದೆ. ಮೊದಲ ಹಂತವಾಗಿ 8 ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದವಾಗಿದೆ ಎಂದು ಅವರು ಹೇಳಿದರು.
100 ನಿಲ್ದಾಣಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ. ಜಿಲ್ಲೆಯ ವಿಕಲಚೇತನರಿಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಿದ್ದೇನೆ. ಜಿಲ್ಲೆಗೆ ಪ್ರಮುಖ ಕಾರ್ಖಾನೆ ತರುವ ಪ್ರಯತ್ನ ಮಾಡುತ್ತಿದ್ದು, ರಾಜ್ಯ ಸರಕಾರದ ಸಹಕಾರ ಬೇಕಿದೆ ಎಂದು ಅವರು ತಿಳಿಸಿದರು.
"ಮೈಷುಗರ್ ಶಾಲೆಯನ್ನು ಖಾಸಗಿ ಕಾರಣ ಮಾಡುವ ಮೂಲಕ ಶಾಲೆಯ ಆಸ್ತಿಯನ್ನು ಹಗಲು ದರೋಡೆ ಮಾಡಲು ಹೊರಟಿದ್ದಾರೆ. ಶಾಲೆಯ ಟ್ರಸ್ಟ್ ಇದಕ್ಕೆ ಅವಕಾಶ ಕೊಡಬಾರದು. ಶಾಲೆಯನ್ನು ಮಾದರಿ ಶಾಲೆ ಮಾಡಲು 25 ಕೋಟಿ ರೂ ನೀಡಲು ತಯಾರಿದ್ದೇನೆ."
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.