×
Ad

ಮುಂಗಾರು ಆರಂಭದಲ್ಲೇ ಕೆಆರ್‌ಎಸ್ ಭರ್ತಿ: ನಾಳೆ ಸಿಎಂ ಸಿದ್ದರಾಮಯ್ಯ ಬಾಗಿನ ಸಮರ್ಪಣೆ

Update: 2025-06-29 22:13 IST

 ಕೃಷ್ಣರಾಜಸಾಗರ ಜಲಾಶಯ

ಮಂಡ್ಯ : ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ(ಕೆಆರ್‌ಎಸ್) 93 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಜೂನ್ ತಿಂಗಳಲ್ಲೇ ಗರಿಷ್ಠ 124.80 ಅಡಿ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ.

ಮುಂಗಾರು ಆರಂಭದಲ್ಲೇ ತುಂಬಿ ತುಳುಕುತ್ತಿರುವ ಕನ್ನಂಬಾಡಿ ಕಟ್ಟೆ ಮಂಡ್ಯ ಜಿಲ್ಲೆಯ ರೈತರ ಮೊಗದಲ್ಲಿ ಹರ್ಷದ ನಗೆ ಮೂಡಿಸಿದೆ. ಜತೆಗೆ ತಮ್ಮ ದಾಹ ನೀಗಿಸಿಕೊಳ್ಳುತ್ತಿರುವ ಬೆಂಗಳೂರು, ಮೈಸೂರು ಮತ್ತು ಪಕ್ಕದ ರಾಮನಗರ ಜಿಲ್ಲೆಯ ಜನತೆಗೂ ನೆಮ್ಮದಿ ತಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ(ಜೂ.30) ಮಧ್ಯಾಹ್ನ 12ಕ್ಕೆ ಜಲಾಶಯದಲ್ಲಿ ಕಾವೇರಿಗೆ ನಾಲ್ಕನೇ ಬಾರಿಗೆ ಬಾಗಿನ ಸಮರ್ಪಣೆ ಮಾಡುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕರು ಗಣ್ಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

1911ರಲ್ಲಿ ಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಿ 1932ಕ್ಕೆ ಪೂರ್ತಿಯಾಗುತ್ತದೆ. ಆ ನಂತರ 1941ರಲ್ಲಿ ಮಾತ್ರ ಜೂನ್ ತಿಂಗಳಲ್ಲಿ 121.4 ಅಡಿಗೆ ತಲುಪಿತ್ತು. ಇದುವರೆಗಿನ ದಾಖಲೆ ಅದೊಂದೇ ಎಂಬುದು ಗಮನಾರ್ಹ.

ಆನಂತರ, 100 ಅಡಿ ದಾಟಿದ ವರ್ಷಗಳೆಂದರೆ, 1954ರಲ್ಲಿ 103.8 ಅಡಿ, 1957ರಲ್ಲಿ 104 ಅಡಿ, 1961, 62, 63ರಲ್ಲಿ 100 ಅಡಿ, 1973ರಲ್ಲಿ 110.2 ಅಡಿ, 1976ರಲ್ಲಿ 104.6 ಅಡಿ, 1978ರಲ್ಲಿ107.6 ಅಡಿ, 1980ರಲ್ಲಿ 106.8 ಅಡಿ, 1984ರಲ್ಲಿ 109.2 ಅಡಿ, 2004ರಲ್ಲಿ102  ಅಡಿ, 2008ರಲ್ಲಿ 102.5 ಅಡಿ, 2018ರಲ್ಲಿ 103.9 ಅಡಿ, 2022ರಲ್ಲಿ 106.3 ಅಡಿ ನೀರು ಸಂಗ್ರಹವಾಗಿತ್ತು.

ಇನ್ನು ಕೃಷ್ಣರಾಜಸಾಗರ ಸಾಗರದಲ್ಲಿ 1979ರಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಪ್ರಥಮ ಬಾರಿಗೆ ಬಾಗಿನ ಅರ್ಪಿಸಿದರು. ಅಂದು ಆರಂಭವಾದ ಬಾಗಿನ ಅರ್ಪಣೆ ಕಾರ್ಯ ಇಂದಿಗೂ ಮುಂದುವರಿದಿದೆ.

ಇದುವರೆಗೆ ಬಿ.ಎಸ್.ಯಡಿಯೂರಪ್ಪ 5 ಬಾರಿ ಬಾಗಿನ ಅರ್ಪಿಸಿದ್ದು ದಾಖಲೆ. ಅದಕ್ಕು ಮುನ್ನ ಎಸ್.ಬಂಗಾರಪ್ಪ ಮೂರು ಬಾರಿ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ತಲಾ ಮೂರು ಬಾರಿ ಬಾಗಿನ ಅರ್ಪಿಸಿದ್ದು, ಸದ್ಯ ಸಿದ್ದರಾಮಯ್ಯ ನಾಲ್ಕನೆ ಬಾರಿ ಬಾಗಿನ ಅರ್ಪಣೆ ಮಾಡುತ್ತಿದ್ದಾರೆ.

1985, 86, 87, 97, 98, 2001, 02, 03, 2012, 2015, 16, 17 ಮತ್ತು 23ರಲ್ಲಿ ಬಾಗಿನ ಅರ್ಪಣೆ ಆಗಿಲ್ಲ. ಕಾರಣ ಕಟ್ಟೆ ಭರ್ತಿ ಆಗಿರಲಿಲ್ಲ ಎಂಬುದು ಗಮನಾರ್ಹ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News