×
Ad

ಮಂಡ್ಯ | ಸಾರಿಗೆ ಬಸ್‌ಗಳ ನಡುವೆ ಸರಣಿ ಅಪಘಾತ; ಮೂವರು ಮೃತ್ಯು, 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Update: 2025-10-19 19:55 IST

ಮಂಡ್ಯ/ಮಳವಳ್ಳಿ, ಅ.19: ಮೂರು ಸಾರಿಗೆ ಬಸ್ಸುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಪ್ರಯಾಣಿಕರು ಸಾವನ್ನಪ್ಪಿ, ಸುಮಾರು 60 ರಿಂದ 70 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ. ಅಪಘಾತದ ರಭಸಕ್ಕೆ ಮೂರು ಬಸ್ ಗಳ ಮುಂಭಾಗ ನಜ್ಜುಗುಜ್ಜಾಗಿದೆ.

ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಓರ್ವ ಪುರುಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಗಾಯಗೊಂಡವರ ಪೈಕಿ ಹತ್ತಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರು ಮತ್ತು ಗಾಯಗೊಂಡವರ ಹೆಸರು ವಿಳಾಸ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆ, ಮೈಸೂರು, ಹತ್ತಿರದ ಇನ್ನಿತರ ಆಸ್ಪತ್ರೆಗಳಿಗೆ ಸಾರ್ವಜನಿಕರ ನೆರವಿನಿಂದ ಪೊಲೀಸರು ರವಾನಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ತೀವ್ರ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ತೀವ್ರ ತೊಂದರೆ ಉಂಟಾಯಿತು ಎಂದು ವರದಿಯಾಗಿದೆ.

ಕೊಳ್ಳೇಗಾಲ ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್ಸಿನ ಚಾಲಕ ರಸ್ತೆಯ ತಿರುವಿನಲ್ಲಿ ದ್ವಿಚಕ್ರವಾಹವನ್ನು ಹಿಂದಿಕ್ಕಲು ಯತ್ನಿಸಿದಾಗ ಎದುರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಮತ್ತೊಂದು ಬಸ್ಸಿಗೆ ಢಿಕ್ಕಿ ಹೊಡೆದಿದೆ. ಇದೇ ವೇಳೆ ಮಾರ್ಗದಲ್ಲೇ ಬರುತ್ತಿದ್ದ ಬಿಎಂಟಿಸಿಗೆ ಸೇರಿದ ಮತ್ತೊಂದು ಬಸ್ಸು ಅಪಘಾತಕ್ಕೀಡಾಗಿದ್ದ ಸಾರಿಗೆ ಬಸ್ಗೆ ಢಿಕ್ಕಿ ಹೊಡೆದಿದ್ದರಿಂದ ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಸಿ ಪಿ ಐ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಳವಳ್ಳಿ ಗ್ರಾಮತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News