ಮಂಡ್ಯ | ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಪ್ರೊ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಮೃತ್ಯು
ಮಂಡ್ಯ: ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ನಿವೃತ್ತ ನಿರ್ದೇಶಕ, 'ಪದ್ಮಶ್ರೀ' ಪುರಸ್ಕೃತ ಕೃಷಿ ವಿಜ್ಞಾನಿ ಪ್ರೊ.ಸುಬ್ಬಣ್ಣ ಅಯ್ಯಪ್ಪನ್ (70) ನಿಗೂಢವಾಗಿ ಮೃತಪಟ್ಟಿದ್ದು, ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಯಲ್ಲಿ ಶನಿವಾರ ಮಧ್ಯಾಹ್ನ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಮೈಸೂರಿನ ವಿಶ್ವೇಶ್ವರನಗರ ಕೈಗಾರಿಕಾ ಪ್ರದೇಶದ ಅಕ್ಕಮಹಾದೇವಿ ರಸ್ತೆಯ ಮನೆಯಲ್ಲಿ ವಾಸವಿದ್ದರು. ಶ್ರೀರಂಗಪಟ್ಟಣದ ಸಾಯಿಬಾಬಾ ಆಶ್ರಮದ ಸಮೀಪ ಮೂರು ದಿನಗಳ ಹಿಂದೆ ನದಿಗೆ ಹಾರಿದ್ದರು ಎನ್ನಲಾಗಿದೆ. ದಡದಲ್ಲಿ ಅವರ ಸ್ಕೂಟರ್ ಸಿಕ್ಕಿದೆ ಎಂದು ಹೇಳಲಾಗಿದೆ.
ಪ್ರೊ.ಸುಬ್ಬಣ್ಣ ಅಯ್ಯಪ್ಪನ್ ಮೇ 7ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಕುಟುಂಬದವರು ಮೈಸೂರಿನ ವಿದ್ಯಾರಣ್ಯಪುರಂ ಠಾಣೆಗೆ ದೂರು ನೀಡಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬ್ಬಣ್ಣ ಅವರು ಮೈಸೂರಿನ ರಾಮಕೃಷ್ಣ ಆಶ್ರಮ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿ ತಟಕ್ಕೆ ಧ್ಯಾನ ಮಾಡಲು ಹೋಗುತ್ತಿದ್ದರು. ಅಲ್ಲಿಯೇ ಅವರ ಮೃತದೇಹ ಸಿಕ್ಕಿದೆ ಎಂದು ಸಂಬಂಧಿಕರಾದ, ವಕೀಲ ಶ್ರೀನಿಧಿ ತಿಳಿಸಿದ್ದಾರೆ.
ಪರಿಚಯ: ಅಯ್ಯಪ್ಪನ್ ಕೃಷಿ, ಮೀನುಗಾರಿಕಾ (ಅಕ್ವಾಕಲ್ಟರ್) ವಿಜ್ಞಾನಿಯಾಗಿ ಹೊಸದಿಲ್ಲಿ, ಮುಂಬೈ, ಭೋಪಾಲ್ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಭಾರತದ 'ನೀಲಿ ಕ್ರಾಂತಿ'ಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರಿಗೆ 2022ನೇ ಸಾಲಿನಲ್ಲಿ 'ಪದ್ಮಶ್ರೀ' ಪ್ರಶಸ್ತಿ ಲಭಿಸಿತ್ತು. ಕೃಷಿ ಕ್ಷೇತ್ರದ ಸಂಶೋಧನೆಯಲ್ಲಿ ಸಕ್ರಿಯರಾಗಿದ್ದುಕೊಂಡೇ, ವಿವಿಧ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಹಿರಿಮೆ ಅವರದು.
ಇಂಫಾಲದ ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯದ (ಸಿಎಯು) ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು.
1955ರ ಡಿ.10ರಂದು ಜನಿಸಿದ್ದ ಅವರು, ಚಾಮರಾಜನಗರ ಜಿಲ್ಲೆ ಯಳಂದೂರು ಮೂಲದವರು. ಮಂಗಳೂರಿನಲ್ಲಿ ಪದವಿ (ಬಿ.ಎಫ್.ಎಸ್ಸಿ-1975) ಹಾಗೂ ಸ್ನಾತಕೋತ್ತರ ಪದವಿ (ಎಂ.ಎಫ್.ಎಸ್ಸಿ- 1977) ವ್ಯಾಸಂಗ ಮಾಡಿದ್ದರು. 1998ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದರು. ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಬರಲ್ ರಿಸರ್ಚ್ ಆಂಡ್ ಎಜುಕೇಶನ್ ನ (ಡಿಎಆರ್ಇ) ಕಾರ್ಯದರ್ಶಿಯಾಗಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್ ನ (ಐಸಿಎಆರ್) ವ್ಯವಸ್ಥಾಪಕ ನಿರ್ದೇಶಕ, ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡಮಿ ಅಧ್ಯಕ್ಷರಾಗಿದ್ದರು.
ಕೃಷಿ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಅವರು ಹಲವು ಸಮಿತಿಗಳ ಅಧ್ಯಕ್ಷರಾಗಿದ್ದರು. ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.