×
Ad

ಮಂಡ್ಯ: ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ; ಆರೋಪಿಯ ಬಂಧನ

Update: 2024-01-24 18:09 IST

ದೀಪಿಕಾ /  ನಿತೇಶ್‌ ಕುಮಾರ್

ಮಂಡ್ಯ: ಪಾಂಡವಪುರ ತಾಲೂಕಿನ ಪ್ರವಾಸಿತಾಣ ಮೇಲುಕೋಟೆಯಲ್ಲಿ ನಡೆದಿದ್ದ ಖಾಸಗಿ ಶಾಲೆಯ ಅತಿಥಿ ಉಪನ್ಯಾಸಕಿ ದೀಪಿಕಾ ಕೊಲೆ ಪ್ರಕರಣ ಸಂಬಂಧ ಮೇಲುಕೋಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೊಲೆಯಾದ ದೀಪಿಕಾ ಅವರ ಗ್ರಾಮ ಮಾಣಿಕ್ಯನಹಳ್ಳಿಯವನೇ ಆದ ನಿತೇಶ್‌ ಕುಮಾರ್(21) ಬಂಧಿತ ಆರೋಪಿ. ಈತನ ಬಗ್ಗೆ ದೀಪಿಕಾ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ದೀಪಿಕಾ ಮೃತದೇಹ ಪತ್ತೆಯಾದ ಬೆನ್ನಲ್ಲೇ ನಿತೀಶ್‌ ಕುಮಾರ್ ತಲೆಮರೆಸಿಕೊಂಡಿದ್ದ. ನಾಪತ್ತೆಯಾಗಿದ್ದ ದೀಪಿಕಾ ದೂರವಾಣಿಗೆ ನಿತೀಶ್‌ನದೇ ಕೊನೆ ಕರೆ ಆಗಿತ್ತು ಎಂದು ದೀಪಿಕಾ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದರು.

ಕಳೆದ ಜ.20ರಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಶಾಲೆಗೆ ತೆರಳಿದ್ದ ದೀಪಿಕಾ ಮರಳಿ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಹುಡುಕಾಟ ನಡೆಸಿದ್ದ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಹಿಳೆಗೆ ವ್ಯಕ್ತಿಯೊಬ್ಬ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿ ಪೊಲೀಸರಿಗೆ ಕಳುಹಿಸಿಕೊಟ್ಟಿದ್ದರು. ಈ ಆಧಾರದಲ್ಲಿ ಹುಡುಕಾಟ ನಡೆಸಿದಾಗ ಬೆಟ್ಟದ ತಪ್ಪಲಿನಲ್ಲಿ ಜ.21ರಂದು ದೀಪಿಕಾ ಅವರ ಸ್ಕೂಟರ್ ಪತ್ತೆಯಾಗಿತ್ತು. ಜ.22ರಂದು ಅದೇ ಸ್ಥಳದಲ್ಲಿ ಹೂತಿಟ್ಟಿದ್ದ ಶವವೂ ಪತ್ತೆಯಾಗಿತ್ತು.

ಈ ನಡುವೆ ದೀಪಿಕಾಗೆ ಪರಿಚಿತನಿದ್ದ ಅದೇ ಗ್ರಾಮದ ನಿತೀಶ್‌ಕುಮಾರ್ ಗ್ರಾಮದಿಂದ ಪರಾರಿಯಾಗಿದ್ದ. ಈತನ ಮೇಲೆ ಅನುಮಾನ ವ್ಯಕ್ತಪಡಿಸಿ ದೀಪಿಕಾ ಪತಿ ಲೋಕೇಶ್ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News