×
Ad

ಮದ್ದೂರಿನಲ್ಲಿ ಕಲ್ಲುತೂರಾಟ | ಸಿಸಿಟಿವಿ ದೃಶ್ಯಗಳು, ವಿಡಿಯೋಗಳನ್ನು ವಿಶ್ಲೇಷಿಸಿ 22 ಮಂದಿಯ ಬಂಧನ : ಐಜಿಪಿ ಮಾಹಿತಿ

"ಕಲ್ಲು ಮಸೀದಿಯಿಂದ ತೂರಿ ಬಂದಿಲ್ಲ, ಅದರ ಪಕ್ಕದಲ್ಲಿ ಹಿಂದಿನಿಂದ ಬಂದಂತೆ ಸಿಸಿಟಿವಿಯಲ್ಲಿ ಕಾಣುತ್ತಿದೆ"

Update: 2025-09-09 20:13 IST

ಮಂಡ್ಯ, ಸೆ.9 : ಸೆ.7ರಂದು ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿನ ಕಲ್ಲು ತೂರಾಟ ಸಂಬಂಧ ಸಿಸಿಟಿವಿ ಚಿತ್ರಗಳು, ವಿಡಿಯೋಗಳನ್ನು ವಿಶ್ಲೇಷಿಸಿದ ನಂತರ ಕಲ್ಲು ತೂರಾಟದಲ್ಲಿ ಭಾಗಿಯಾದವರನ್ನು ಪುರಾವೆಗಳೊಂದಿಗೆ ಬಂಧಿಸಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಾರೆ.

ಮಂಗಳವಾರ ಮದ್ದೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ 22 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಹಲವರ ಬಂಧನ ಸಾಧ್ಯತೆ ಇದೆ ಎಂದರು.

ಮಸೀದಿ ಬಳಿ ಕಲ್ಲು ತೂರಾಟದ ವೇಳೆ ಬೀದಿ ದೀಪಗಳನ್ನು ಆಫ್ ಮಾಡಲಾಗಿದ್ದು, ಇದು ಪೂರ್ವ ಯೋಜಿತವೇ ಎಂಬ ಅನುಮಾನ ಮೂಡಿಸುತ್ತಿದೆ. ಕಲ್ಲು ಮಸೀದಿಯಿಂದ ತೂರಿ ಬಂದಿಲ್ಲ, ಅದರ ಪಕ್ಕದಲ್ಲಿ ಹಿಂದಿನಿಂದ ಬಂದಂತೆ ಸಿಸಿಟಿವಿಯಲ್ಲಿ ಕಾಣುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಇದರ ಹಿಂದೆ ಪಿತೂರಿ ಇದೆಯೇ? ಅದು ಹೇಗೆ ಸಂಭವಿಸಿತು? ಇದಕ್ಕೆ ಮೂಲ ಕಾರಣವೇನು? ಎಂಬುದು ತನಿಖೆ ನಂತರ ಗೊತ್ತಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಸ್ತುತ ಮದ್ದೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೊಲೀಸರನ್ನು ನಿಯೋಜಿಸಲಾಗಿದೆ. ನಾಳೆ (ಬುಧವಾರ) ಬಿಜೆಪಿ , ಹಿಂದುತ್ವ ಸಂಘಟನೆಗಳು ಪಟ್ಟಣದಲ್ಲಿ ಸಾಮೂಹಿಕ ಗಣೇಶಮೂರ್ತಿ ವಿಸರ್ಜನ ಮೆರವಣಿಗೆ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

5 ಮಂದಿ ಎಸ್ಪಿ, 4 ಮಂದಿ ಎಎಸ್ಪಿ,10 ಡಿವೈಎಸ್ಪಿ, 30 ಇನ್ಸ್ಪೆಕ್ಟರ್, 32 ಪಿಎಸ್ಐ, 600 ಪೊಲೀಸರು,15 ಕೆಎಸ್ಆರ್ಪಿ ತುಕಡಿ ಹಾಗೂ 2 ಆರ್ ಎ ಎಫ್ ಕಂಪನಿ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News