ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಈಗಾಗಲೇ ಗಂಭೀರ ಚಿಂತನೆ ಮಾಡಲಾಗಿದೆ : ಸಂಸದೆ ಸುಮಲತಾ

Update: 2024-04-02 11:44 GMT

ಮಂಡ್ಯ : ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.

ಈ ಕುರಿತು ʼಎಕ್ಸ್‌ʼ ನಲ್ಲಿ ಬರೆದುಕೊಂಡಿರುವ ಅವರು, "ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಮಂಡ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ ಎಂದು ಸಂಸದೆ ಹೇಳಿದ್ದಾರೆ.

"ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ " ಎಂದು ತಿಳಿಸಿದ್ದಾರೆ.

"ನಿಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮ ಸಮಯವನ್ನು ನನಗೆ ಕೊಟ್ಟು ಮನೆವರೆಗೂ ಬಂದಿದ್ದೀರಿ. ಕೆಲವರು ತಾವು ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ದೊಡ್ಡದು. ಯಾವತ್ತೂ ಅದು ಹಾಗೆಯೇ ಇರಲಿ ಎಂದು ಆಶಿಸುವೆ" ಎಂದು ಬರೆದುಕೊಂಡಿದ್ದಾರೆ.

"ನಾಳೆ (ಏಪ್ರಿಲ್ 3) ಬೆಳಗ್ಗೆ 10 ಗಂಟೆಗೆ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ನನ್ನ ಮತ್ತು ನಿಮ್ಮೆಲ್ಲರ ನಿಲುವನ್ನು ಸ್ಪಷ್ಟ ಪಡಿಸುವ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತಿದ್ದೇನೆ. ಅಂದು ನಮ್ಮೊಂದಿಗೆ ನಮ್ಮೆಲ್ಲರ ಪ್ರೀತಿಯ ದರ್ಶನ್, ಅಭಿಷೇಕ್ ಅಂಬರೀಶ್ ಇರಲಿದ್ದಾರೆ. ತಮ್ಮ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ" ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News