×
Ad

ಮಣಿಪುರ: ಹಿಂಸೆಗೆ ತಿರುಗಿದ ರಾಜ್ಯಪಾಲರ ವಿರುದ್ಧದ ಪ್ರತಿಭಟನೆ

Update: 2025-05-26 08:27 IST

PC: x.com/diana_warep

ಇಂಫಾಲ: ರಾಜ್ಯ ಸಾರಿಗೆ ನಿಗಮದ ಬಸ್ ಗಳ ಫಲಕದಿಂದ ಮಣಿಪುರ ಹೆಸರನ್ನು ಕಿತ್ತುಹಾಕಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಬಹಿರಂಗವಾಗಿ ರಾಜ್ಯದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಭಾನುವಾರ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ರಾಜಭವನದ ಮುಂದೆ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ ಐದು ಮಂದಿ ಪ್ರತಿಭಟನಾಕಾರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ರಾಜಭವನದಿಂದ ಕೇವಲ 150 ಮೀಟರ್ ದೂರದ ಐತಿಹಾಸಕ ಕಾಂಗ್ಲಾ ಗೇಟ್ ಬಳಿ ಸಮಾವೇಶಗೊಂಡಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಸಿಡಿಸಿದರು.

ಪ್ರಭಾವಿ ಮಣಿಪುರ ಸಮಗ್ರತೆ ಕುರಿತ ಸಮನ್ವಯ ಸಮಿತಿ ಪ್ರತಿಭಟನೆಗೆ ಕರೆ ನೀಡಿದ್ದು, ರಾಜ್ಯ ಹಾಗೂ ಜನತೆಗೆ ಅವಮಾನ ಮಾಡಿದ ರಾಜ್ಯಪಾಲರು 48 ಗಂಟೆಗಳ ಒಳಗಾಗಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

"ರಾಜ್ಯಪಾಲರು ಮೌನ ವಹಿಸುವ ಮೂಲಕ ರಾಜ್ಯದ ಜನತೆಯ ಭಾವನೆಗಳಿಗೆ ಅಗೌರವ ತೋರಿದ್ದಾರೆ. ಅವರು ಹಾಗೂ ಆಡಳಿತ ವ್ಯವಸ್ಥೆ ರಾಜ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಕಳಂಕ ತಂದಿದ್ದಾರೆ... ಗ್ವಾಲ್ಟಬಿಯಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಸಲು ನೇಮಿಸಿದ ತನಿಖಾ ಆಯೋಗ, ಇದರಲ್ಲಿ ಷಾಮೀಲಾದವರಿಗೆ ಶಿಕ್ಷೆ ವಿಧಿಸುವ ಬಗ್ಗೆ ಏನನ್ನೂ ಹೇಳಿಲ್ಲ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಉಕ್ರುಲ್ ಜಿಲ್ಲೆಯಲ್ಲಿ ಶಿರೂಯಿ ಲಿಲಿ ಉತ್ಸವದಲ್ಲಿ ಪಾಲ್ಗೊಳ್ಳಲು ಪತ್ರಕರ್ತರನ್ನು ಒಯ್ಯುತ್ತಿದ್ದ ಮಣಿಪುರ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಗ್ವಾಲ್ಟಾಬಿ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಫಲಕದಿಂದ "ಮಣಿಪುರ" ಹೆಸರು ಕಿತ್ತುಹಾಕುವಂತೆ ಸೂಚಿಸಲಾಗಿತ್ತು.

ಆಕ್ರೋಶದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಭದ್ರತಾ ಸಿಬ್ಬಂದಿ ಮತ್ತು ಮಣಿಪುರ ರಾಜ್ಯ ಸಾರಿಗೆ ಬಸ್ ಒಳಗೊಂಡ ಈ ಘಟನೆ ಬಗೆಗಿನ ಸತ್ಯಾಂಶವನ್ನು ಪರೀಕ್ಷಿಸಲು ತನಿಖಾ ಸಮಿತಿಯನ್ನು ನೇಮಕ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News