×
Ad

ನಾಳೆ ಮಣಿಪುರಕ್ಕೆ ಮೋದಿ | 2023ರಲ್ಲಿ ಭುಗಿಲೆದ್ದ ಜನಾಂಗೀಯ ಘರ್ಷಣೆ

ಬಳಿಕ ಪ್ರಧಾನಿಯ ಪ್ರಪ್ರಥಮ ಭೇಟಿ

Update: 2025-09-12 21:30 IST

ನರೇಂದ್ರ ಮೋದಿ | PC : PTI 

ಹೊಸದಿಲ್ಲಿ,ಸೆ.12: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. 2023ರಲ್ಲಿ ಜನಾಂಗೀಯ ಘರ್ಷಣೆ ಭುಗಿಲೆದ್ದ ಬಳಿಕ ಈಶಾನ್ಯ ಭಾರತದ ಆ ರಾಜ್ಯಕ್ಕೆ ಪ್ರಧಾನಿಯ ಮೊದಲ ಭೇಟಿ ಇದಾಗಿದೆ.

ತನ್ನ ಮಣಿಪುರ ಪ್ರವಾಸದಲ್ಲಿ ನರೇಂದ್ರ ಮೋದಿ ಅವರು ಚುರಾಚಂದ್‌ ಪುರ ಹಾಗೂ ಇಂಫಾಲ್‌ ನಲ್ಲಿ ಗಲಭೆ ಸಂತ್ರಸ್ತರೊಂದಿಗೆ ಮಾತನಾಡಲಿದ್ದಾರೆ ಎಂದು ಮಣಿಪುರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯಲ್ ಶುಕ್ರವಾರ ಹೇಳಿದ್ದಾರೆ.

2023ರ ಮೇ ತಿಂಗಳಲ್ಲಿ ಮೈತೇಯಿ ಹಾಗೂ ಕುಕಿರೆ-ಹಮಾರ್ ಸಮುದಾಯಗಳ ನಡುವೆ ಭುಗಿಲೆದ್ದ ಸಂಘರ್ಷದಲ್ಲಿ ಕನಿಷ್ಠ 260 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 59 ಸಾವಿರಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.

ಮಣಿಪುರ ಭೇಟಿ ಸಂದರ್ಭ ಮೋದಿ ಅವರು ಚುರಾಚಂದ್‌ ಪುರದಲ್ಲಿರುವ ಪೀಸ್‌ ಗ್ರೌಂಡ್‌ ನಲ್ಲಿ 7300 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ ಹಾಗೂ ಇಂಫಾಲದಲ್ಲಿ 1200 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಇಂಫಾಲ ಹಾಗೂ ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

ಚುರಾಚಂದ್‌ಪುರದಲ್ಲಿ ಗುರುವಾರ ಪ್ರಧಾನಿ ಭೇಟಿಯ ಪೂರ್ವಸಿದ್ಧತೆಯಾಗಿ ರಸ್ತೆಗಳಲ್ಲಿ ಸ್ಥಾಪಿಸಲಾಗಿದ್ದ ಆಲಂಕಾರಿಕ ಸಂರಚನೆಗಳನ್ನು ಗುಂಪೊಂದು ಭಗ್ನಗೊಳಿಸಲು ಯತ್ನಿಸಿದ ಆನಂತರ ಘರ್ಷಣೆಯುಂಟಾಗಿರುವುದಾಗಿರುವುದಾಗಿ ವರದಿಯಾಗಿದೆ.

ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆಯ ಬಳಿಕ ಫೆಬ್ರವರಿಯಿಂದ ಮಣಿಪುರವು ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ.

ಮೋದಿ ಭೇಟಿಗೆ ಕೆಲವೇ ದಿನಗಳ ಮೊದಲು, ಸೆಪ್ಟೆಂಬರ್ 4ರಂದು ಮಣಿಪುರ ಆಡಳಿತವು ನಿಯಮಗಳ ಪರಿಷ್ಕರಣೆಯೊಂದಿಗೆ ಕಾರ್ಯಾಚರಣೆಗಳ ಅಮಾನತು ಒಪ್ಪಂದವನ್ನು ನವೀಕರಿಸುವ ಕುರಿತಾಗಿ ಕುಕಿ-ರೆ ಗುಂಪುಗಳೊಂದಿಗೆ ಒಪ್ಪಂದಕ್ಕೆ ಸಹಿಹಾಕಿತ್ತು.

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದಾಗಿನಿಂದ ಆ ರಾಜ್ಯಕ್ಕೆ ಭೇಟಿ ನೀಡದೆ ಇದ್ದುದಕ್ಕಾಗಿ ಪ್ರಧಾನಿಯವರು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಣಿಪುರವನ್ನು ‘ಹೊರಗುತ್ತಿಗೆ’ಯಾಗಿ ನೀಡುವ ಮೂಲಕ ಮೋದಿಯವರು ತನ್ನ ಹೊಣೆಗಾರಿಕೆಯನ್ನು ತ್ಯಜಿಸಿದ್ದಾರೆಂದು ಕಾಂಗ್ರೆಸ್ ಕಳೆದ ಜನವರಿಯಲ್ಲಿ ಆಪಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News