ಜಮ್ಮು-ಕಾಶ್ಮೀರದ ಕಿಶ್ತ್ ವಾಡದಲ್ಲಿ ಮೇಘ ಸ್ಫೋಟ ಕನಿಷ್ಠ 38 ಸಾವು; 120 ಮಂದಿಯ ರಕ್ಷಣೆ
Photo credit: indiatoday.in
ಶ್ರೀನಗರ, ಆ. 14: ಜಮ್ಮು ಹಾಗೂ ಕಾಶ್ಮೀರದ ಕಿಶ್ತ್ ವಾಡ ಜಿಲ್ಲೆಯ ಚಶೋತಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭಾರೀ ಮೇಘ ಸ್ಫೋಟದಿಂದ ಉಂಟಾದ ದೀಢೀರ್ ಪ್ರವಾಹದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ. 120 ಮಂದಿಯನ್ನು ರಕ್ಷಿಸಲಾಗಿದೆ.
ಮಚೈಲ್ ಮಾತಾ ಯಾತ್ರಾ ನಡೆಯುತ್ತಿರುವ ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ನಿರಂತರ ಸುರಿಯುತ್ತಿರುವ ಮಳೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಮೇಘ ಸ್ಫೋಟ ಸಂಭವಿಸಿದ ಸಂದರ್ಭ ಅಲ್ಲಿ ಸುಮಾರು 250ಕ್ಕೂ ಅಧಿಕ ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಇದುವರೆಗೆ ಕನಿಷ್ಠ 38 ಮೃತದೇಹಗಳು ಪತ್ತೆಯಾಗಿವೆ. ದುರಂತ ಸಂಭವಿಸಿದ ಸಂದರ್ಭ ಹಲವು ಯಾತ್ರಿಗಳು ಹಾಗೂ ಸ್ಥಳೀಯರು ಆ ಪ್ರದೇಶದಲ್ಲಿ ಇದ್ದರು. ಆದುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಆ ಪ್ರದೇಶದಲ್ಲಿ ಪಾರ್ಕಿಂಗ್ ಸ್ಥಳ, ಲಂಗರ್ (ಸಮುದಾಯದ ಅಡುಗೆಮನೆ) ಹಾಗೂ ಸಿಆರ್‌ಪಿಎಫ್ ಶಿಬಿರ ಇತ್ತು. ಯಾತ್ರೆಯ ಸಂದರ್ಭವಾದುದರಿಂದ ಹಲವರು ಸಿಲುಕಿಕೊಂಡಿದ್ದಾರೆ’’ ಎಂದು ಕಿಶ್ತ್ ವಾಡದ ಡಿಡಿಸಿ ಅಧ್ಯಕ್ಷರಾದ ಪೂಜಾ ಠಾಕೂರ್ ತಿಳಿಸಿದ್ದಾರೆ.
‘‘ದುರಂತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಇದುವರೆಗೆ 100ರಿಂದ 150 ಜನರು ಗಾಯಗೊಂಡಿರುವುದು ತಿಳಿದು ಬಂದಿದೆ. ಅಲ್ಲಿ ಸಿಲುಕಿಕೊಂಡವರನ್ನು ತೆರೆವುಗೊಳಿಸಲು ಹಾಗೂ ಅವರಿಗೆ ವೈದ್ಯಕೀಯ ನೆರವು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಹಠಾತ್ ಪ್ರವಾಹ ಈ ಪ್ರದೇಶದಲ್ಲಿರುವ ಪಾರ್ಕಿಂಗ್ ಸ್ಥಳ ಲಂಗರ್ ಹಾಗೂ ಸಿಆರ್‌ಪಿಎಫ್ ಶಿಬಿರವನ್ನು ಆವರಿಸಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಪ್ರತಿಕೂಲ ಹವಾಮಾನ ಹಾಗೂ ಹಾನಿಗೀಡಾದ ರಸ್ತೆ ಈ ಪ್ರಯತ್ನಕ್ಕೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ತಂಡಗಳು ಹಾಗೂ ನಾಗರಿಕ ಆಡಳಿತ ದುರಂತ ಸಂಭವಿಸಿದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಗಾಯಗೊಂಡವರನ್ನು ತೆರವುಗೊಳಿಸಲು ಆ್ಯಂಬುಲೆನ್ಸ್ ಅನ್ನು ನಿಯೋಜಿಸಲಾಗಿದೆ. ರಸ್ತೆಗಳು ಕೊಚ್ಚಿ ಹೋಗಿರುವುದರಿಂದ ಹಾಗೂ ನಿರಂತರ ಮಳೆ ಸುರಿಯುತ್ತಿರುವುದರಿಂದ ಪರಿಹಾರ ಕಾರ್ಯಾಚರಣೆ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.
ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ ‘‘ಜಮ್ಮು ಹಾಗೂ ಕಾಶ್ಮೀರದ ಕಿಶ್ತ್ ವಾಡದಲ್ಲಿ ಸಂಭವಿಸಿದ ಮೇಘ ಸ್ಪೋಟ ಹಾಗೂ ಪ್ರವಾಹದಿಂದ ಸಂತ್ರಸ್ತರಾದವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ’’ ಎಂದಿದ್ದಾರೆ.