ಜಮ್ಮುಕಾಶ್ಮೀರ | ಕುಲ್ಗಾಮ್‌ನಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಮೃತ್ಯು
ಶ್ರೀನಗರ : ಜಮ್ಮುಕಾಶ್ಮೀರದ ಕುಲ್ಗಾಮ್‌ನಲ್ಲಿ ಶುಕ್ರವಾರ ರಾತ್ರಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎಂದು ಭಾತೀಯ ಸೇನೆ ತಿಳಿಸಿದೆ.
ಕುಲ್ಗಾಮ್‌ನಲ್ಲಿ ಆಗಸ್ಟ್ 1ರಂದು ಕಾರ್ಯಾಚರಣೆ ಪ್ರಾರಂಭವಾಗಿತ್ತು. ಭದ್ರತಾಪಡೆಗಳು ಈವರೆಗೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ದೇಶ ಸೇವೆ ಮಾಡುತ್ತಿದ್ದ ಪ್ರೀತ್‌ಪಾಲ್ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಅವರ ತ್ಯಾಗವನ್ನು ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಅವರ ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ. ಭಾರತೀಯ ಸೇನೆ ಈ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಹೇಳಿದೆ.
ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪದಕರ ನಡುವಿನ ಗುಂಡಿನ ಚಕಮಕಿ ಶನಿವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಕಣಿವೆಯಲ್ಲಿ ನಡೆದ ಅತಿ ದೀರ್ಘ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಇದು ಒಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.