ತಮಿಳುನಾಡು | ಶಾಲಾ ವಾಹನಕ್ಕೆ ರೈಲು ಢಿಕ್ಕಿ : ಮೂವರು ವಿದ್ಯಾರ್ಥಿಗಳು ಮೃತ್ಯು
Photo credit: PTI
ಚೆನ್ನೈ : ತಮಿಳುನಾಡಿನ ಕಡಲೂರು ಬಳಿಯ ಸೆಮ್ಮಂಕುಪ್ಪಂನಲ್ಲಿ ಶಾಲಾ ವಾಹನಕ್ಕೆ ರೈಲು ಢಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ತೆರೆದ ರೈಲ್ವೆ ಗೇಟ್ ದಾಟುವಾಗ ಶಾಲಾ ವ್ಯಾನ್‌ಗೆ ರೈಲು ಢಿಕ್ಕಿ ಹೊಡೆದು 50 ಮೀಟರ್‌ಗಳಷ್ಟು ದೂರಕ್ಕೆ ಎಳೆದೊಯ್ದಿದೆ. ಅಪಘಾತ ಸಂಭವಿಸಿದಾಗ ಶಾಲಾ ವಾಹನದಲ್ಲಿ ಐವರು ವಿದ್ಯಾರ್ಥಿಗಳು ಮತ್ತು ಚಾಲಕನಿದ್ದ ಎಂದು ಹೇಳಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಕಡಲೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಈ ಕುರಿತು ಜಂಟಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಪ್ರಾಥಮಿಕ ತನಿಖೆಯ ಪ್ರಕಾರ, ರೈಲು ಸಮೀಪಿಸುತ್ತಿದ್ದಂತೆ ಗೇಟ್ ಕೀಪರ್ ಗೇಟ್ ಮುಚ್ಚಲು ಮುಂದಾದಾಗ ವ್ಯಾನ್ ಚಾಲಕ ದಿಢೀರ್ ಹಳಿಯನ್ನು ದಾಟಲು ಮುಂದಾಗಿದ್ದಾನೆ. ಇದರಿಂದಾಗಿ ಅಪಘಾತ ಸಂಭವಿಸಿದೆ.