ಕರ್ನೂಲ್ ಬಸ್ ದುರಂತದಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿಕೆ
► ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ ► ಏಸಿ ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಪಾರಾದ 12 ಜನರು ► ಬೈಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಘೋರ ಅಗ್ನಿಕಾಂಡ
Photo credit: PTI
ಕರ್ನೂಲು,ಅ.24: ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ಗೆ ಶುಕ್ರವಾರ ಬೆಳಗಿನ ಜಾವ ಇಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 20 ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಕರ್ನೂಲು ಜಿಲ್ಲೆಯ ಕಲ್ಲೂರು ಮಂಡಲ ವ್ಯಾಪ್ತಿಯ ಚಿನ್ನಟೆಕೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬೈಕೊಂದು ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಹವಾನಿಯಂತ್ರಿತ ವೋಲ್ವೊ ಸ್ಲೀಪರ್ ಬಸ್‌ಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಈ ಸಂದರ್ಭದಲ್ಲಿ ಬಸ್ಸಿನಲ್ಲಿ 40 ಪ್ರಯಾಣಿಕರಿದ್ದರು. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು,ಕನಿಷ್ಠ 20 ಜನರು ಕುಳಿತಲ್ಲಿಯೇ ಸಜೀವ ದಹನಗೊಂಡಿದ್ದಾರೆ. 12 ಜನರು ಕಿಟಕಿ ಗಾಜುಗಳನ್ನು ಒಡೆದು ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾರೆ. ದುರಂತ ಸಂಭವಿಸಿದಾಗ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಬೈಕ್ ಸವಾರ ಕೂಡ ಮೃತಪಟ್ಟಿದ್ದಾನೆ.
ಬೈಕೊಂದು ನಿಯಂತ್ರಣ ತಪ್ಪಿ ಬಸ್‌ಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಅದರ ಪೆಟ್ರೋಲ್ ಟ್ಯಾಂಕ್ ಒಡೆದು ಹೋಗಿತ್ತು ಎನ್ನುವುದನ್ನು ಪ್ರಾಥಮಿಕ ತನಿಖೆಯು ಬಹಿರಂಗಗೊಳಿಸಿದೆ. ಇಂಧನ ಸೋರಿಕೆ ಮತ್ತು ಘರ್ಷಣೆಯಿಂದಾಗಿ ಬೆಂಕಿ ಹತ್ತಿಕೊಂಡಿದ್ದು,ಇದೇ ವೇಳೆ ಬಸ್ಸಿನ ಇಂಧನ ಟ್ಯಾಂಕ್ ಕೂಡ ಒಡೆದಿದ್ದು ಕ್ಷಣಮಾತ್ರದಲ್ಲಿ ಬೆಂಕಿಯ ಜ್ವಾಲೆಗಳು ಇಡೀ ಬಸ್ಸನ್ನು ಆವರಿಸಿಕೊಂಡು ಒಳಗಿದ್ದ ಪ್ರಯಾಣಿಕರು ಬೆಂಕಿಯಲ್ಲಿ ಸಿಲುಕಿದ್ದರು.
ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ವೋಲ್ವೋ ಬಸ್ ನಸುಕಿನ ಮೂರು ಗಂಟೆಯ ಸುಮಾರಿಗೆ ಬೈಕೊಂದಕ್ಕೆ ಢಿಕ್ಕಿ ಹೊಡೆದಿತ್ತು. ಬೈಕ್ ಬಸ್ಸಿನಡಿ ಸಿಕ್ಕಿಕೊಂಡಿದ್ದು,ಬಹುಶಃ ಇದರಿಂದ ಕಿಡಿಯಂಟಾಗಿ ಬಸ್ಸಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವಾಗಿತ್ತು. ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ಬೆಂಕಿಗೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಶ್ರಮಿಸುತ್ತಿದೆ. ಹವಾ ನಿಯಂತ್ರಿತ ಬಸ್ ಆಗಿದ್ದರಿಂದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆಯುವಂತಾಗಿತ್ತು. ಗಾಜನ್ನು ಒಡೆಯಲು ಸಾಧ್ಯವಾದವರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಕರ್ನೂಲು ಎಸ್‌ಪಿ ವಿಕ್ರಾಂತ ಪಾಟೀಲ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಈ ಭೀಕರ ದುರಂತದ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಸಂತಾಪಗಳನ್ನು ವ್ಯಕ್ತಪಡಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು,‘ಈ ಭೀಕರ ಬೆಂಕಿ ಅವಘಡವು ನನಗೆ ಆಘಾತವನ್ನುಂಟು ಮಾಡಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಸರಕಾರದ ಅಧಿಕಾರಿಗಳು ಗಾಯಾಳುಗಳು ಮತ್ತು ಪೀಡಿತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲಿದ್ದಾರೆ ’ ಎಂದು ಹೇಳಿದ್ದಾರೆ.
ಪ್ರಧಾನಿ ಶೋಕ
ಪ್ರಧಾನಿ ನರೇಂದ್ರ ಮೋದಿಯವರು ಪ್ರಯಾಣಿಕರ ಸಾವುಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿದ್ದು,ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.
‘ದುರಂತದಲ್ಲಿ ಜೀವಹಾನಿಯಿಂದಾಗಿ ಅತ್ಯಂತ ದುಃಖವುಂಟಾಗಿದೆ. ಈ ಕಠಿಣ ಸಮಯದಲ್ಲಿ ಪೀಡಿತ ಜನರು ಮತ್ತು ಅವರ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ ’ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ರಾಷ್ಟ್ರಪತಿ ಸಂತಾಪ
ಸಂತಾಪಗಳನ್ನು ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
‘ಕರ್ನೂಲಿನಲ್ಲಿ ಬಸ್‌ಗೆ ಬೆಂಕಿ ಹತ್ತಿಕೊಂಡು ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಕರು ಸಾವನ್ನಪ್ಪಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಶೋಕತಪ್ತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಮತ್ತು ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ’ ಎಂದು ಮುರ್ಮು ಹೇಳಿದ್ದಾರೆ.
ಅಪಘಾತವು ನಸುಕಿನ 3 ಮತ್ತು 3:10ರ ನಡುವೆ ಸಂಭವಿಸಿದ್ದು,ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂಧನ ಸೋರಿಕೆಯಾಗಿದ್ದು ಬೆಂಕಿ ಹತ್ತಿಕೊಳ್ಳಲು ಕಾರಣವಾಗಿತ್ತು. 41 ಪ್ರಯಾಣಿಕರ ಪೈಕಿ 21 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಉಳಿದ 20 ಜನರ ಪೈಕಿ 11 ಮೃತದೇಹಗಳನ್ನು ಈವರೆಗೆ ಗುರುತಿಸಲಾಗಿದೆ. ಉಳಿದ ಮೃತದೇಹಗಳನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕರ್ನೂಲು ಜಿಲ್ಲಾಧಿಕಾರಿ ಎ.ಸಿರಿ ಸುದ್ದಿಸಂಸ್ಥೆಗೆ ತಿಳಿಸಿದರು.
ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಬಲಿ
ಭೀಕರ ಬಸ್ ದುರಂತದಲ್ಲಿ ಮೃತಪಟ್ಟವರಲ್ಲಿ ಬೆಂಗಳೂರಿನಲ್ಲಿ ವಾಸವಾಗಿದ್ದ ಆಂಧ್ರಪ್ರದೇಶದ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ.
ಮೃತರನ್ನು ಗೊಲ್ಲ ರಮೇಶ(35),ಅವರ ಪತ್ನಿ ಅನುಷಾ(30),ಮಕ್ಕಳಾದ ಮಾನ್ವಿತಾ(10) ಮತ್ತು ಮನೀಶ(12) ಎಂದು ಗುರುತಿಸಲಾಗಿದೆ.
ನೆಲ್ಲೂರು ಜಿಲ್ಲೆಯ ವಿಂಜಾಮುರು ಮಂಡಲ ವ್ಯಾಪ್ತಿಯ ಗೊಲ್ಲವರಿಪಳ್ಳಿ ಗ್ರಾಮಕ್ಕೆ ಸೇರಿದ ಈ ನತದೃಷ್ಟ ಕುಟುಂಬ ದೀಪಾವಳಿ ಹಬ್ಬಕ್ಕಾಗಿ ತವರಿಗೆ ತೆರಳಿತ್ತು. ಬೆಂಗಳೂರಿಗೆ ಮರಳುತ್ತಿರುವಾಗ ಬಸ್‌ನಲ್ಲಿ ಗಾಢನಿದ್ರೆಯಲ್ಲಿರುವಾಗಲೇ ಸಾವಿಗೆ ಜಾರಿದ್ದಾರೆ.
ಐದು ಲ.ರೂ.ಪರಿಹಾರ ಘೋಷಿಸಿದ ತೆಲಂಗಾಣ
ಕರ್ನೂಲು ಬಳಿ ಭೀಕರ ಬಸ್ ಬೆಂಕಿ ಅವಘಡದಲ್ಲಿ ಮೃತರ ಕುಟುಂಬಗಳಿಗೆ ತೆಲಂಗಾಣ ಸರಕಾರವು ತಲಾ ಐದು ಲ.ರೂ.ಗಳ ಪರಿಹಾರವನ್ನು ಘೋಷಿಸಿದೆ.