×
Ad

ರಾಜಸ್ಥಾನ | ಹೋಳಿ ಬಣ್ಣ ಹಚ್ಚಲು ನಿರಾಕರಿಸಿದ ಯುವಕನನ್ನು ಥಳಿಸಿ, ಉಸಿರುಗಟ್ಟಿಸಿ ಕೊಲೆ

Update: 2025-03-14 12:07 IST

ಸಾಂದರ್ಭಿಕ ಚಿತ್ರ (credit: Grok)

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಹೋಳಿ ಹಬ್ಬಕ್ಕೆ ಮೊದಲೇ ಆಘಾತಕಾರಿ ಘಟನೆ ನಡೆದಿದೆ. ಬುಧವಾರದಂದು ತನ್ನ ಮೇಲೆ ಬಣ್ಣ ಬಳಿಯಲು ಬಂದ ಮೂವರನ್ನು ತಡೆಯಲು ಯತ್ನಿಸಿದ ಯುವಕನನ್ನು ಥಳಿಸಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂಸರಾಜ್(25) ಕೊಲೆಯಾದ ಯುವಕ. ಈತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಬುಧವಾರ ಸಂಜೆ ರಾಲ್ವಾಸ್ ಗ್ರಾಮದ ಗ್ರಂಥಾಲಯದಲ್ಲಿ ಹಂಸರಾಜ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಈ ವೇಳೆ ಅಶೋಕ್, ಬಬ್ಲು ಮತ್ತು ಕಾಲುರಾಮ್ ಎಂಬವರು ಹಂಸರಾಜ್‌ಗೆ ಬಣ್ಣ ಹಚ್ಚಲು ಸ್ಥಳೀಯ ಗ್ರಂಥಾಲಯಕ್ಕೆ ಹೋದರು. ಹಂಸರಾಜ್ ಈ ವೇಳೆ ನನ್ನ ಮೇಲೆ ಬಣ್ಣ ಹಚ್ಚ ಬೇಡಿ ಎಂದು ವಿರೋಧವನ್ನು ವ್ಯಕ್ತಪಡಿಸಿದನು. ಈ ವೇಳೆ ಅಶೋಕ್, ಬಬ್ಲು ಮತ್ತು ಕಾಲುರಾಮ್ ಆತನನ್ನು ಕಾಲಿನಿಂದ ಒದ್ದು, ಬೆಲ್ಟ್‌ನಿಂದ ಥಳಿಸಿ, ಕತ್ತು ಹಿಸುಕಿ, ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಅಗರ್‌ವಾಲ್‌ ಹೇಳಿದರು.

ಘಟನೆಯನ್ನು ಖಂಡಿಸಿ ಹಂಸರಾಜ್ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಹಂಸರಾಜ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಓರ್ವರಿಗೆ ಸರಕಾರಿ ನೌಕರಿ ನೀಡಬೇಕು, ಮೂವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News