×
Ad

ತಮಿಳುನಾಡು | ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ ಪ್ರಕರಣ : ಮೃತರ ಸಂಖ್ಯೆ 39ಕ್ಕೆ ಏರಿಕೆ

ತಮಿಳುನಾಡು ಸರಕಾರದಿಂದ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

Update: 2025-09-28 10:13 IST

Photo | ndtv

ಚೆನ್ನೈ: ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

ಒಂಬತ್ತು ಮಕ್ಕಳು ಮತ್ತು 17 ಮಹಿಳೆಯರು ಸೇರಿದಂತೆ 39 ಜನರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. 46 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿ ಜನರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಇದರಿಂದ ಕಾಲ್ತುಳಿತ ಸಂಭವಿಸಿದೆ. ನಮಕ್ಕಲ್‌ನಲ್ಲಿ ರ‍್ಯಾಲಿಯ ನಂತರ ವಿಜಯ್ ಭಾಷಣಕ್ಕೆ ನಿಗದಿಯಾಗಿದ್ದ ಸ್ಥಳದಲ್ಲಿ ಕನಿಷ್ಠ 30,000 ಜನರು ಸೇರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.

ವಿಜಯ್‌ ತಡವಾಗಿ ಬಂದಿದ್ದರಿಂದ ಜನಸಂಖ್ಯೆ ಮತ್ತಷ್ಟು ಹೆಚ್ಚಳವಾಗಿತ್ತು. ಬಿಸಿಲು ಮತ್ತು ಜನದಟ್ಟಣೆಯಿಂದಾಗಿ ಕೆಲವರಿಗೆ ಉಸಿರುಗಟ್ಟಿದೆ. ವಿಜಯ್ ತಮ್ಮ ಭಾಷಣವನ್ನು ನಿಲ್ಲಿಸಿ  ಜನಸಮೂಹದ ಮೇಲೆ ನೀರಿನ ಬಾಟಲಿಗಳನ್ನು ಎಸೆಯುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.

ಘಟನೆ ಕುರಿತು ಕೇಂದ್ರ ಗೃಹ ಸಚಿವಾಲಯ ತಮಿಳುನಾಡು ಸರಕಾರದಿಂದ ವರದಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಉಸ್ತುವಾರಿ ಡಿಜಿಪಿ ಜಿ ವೆಂಕಟರಾಮನ್ ಮಾತನಾಡಿ, ವಿಜಯ್ ಅವರ ಪಕ್ಷವು ಮೊದಲು ಕರೂರ್ ಲೈಟ್ಹೌಸ್ ರೌಂಡಾನಾದಲ್ಲಿ ರ‍್ಯಾಲಿ ನಡೆಸಲು ಅನುಮತಿ ಕೇಳಿತ್ತು. ಕಳೆದ ಎರಡು ರ‍್ಯಾಲಿಗಳಲ್ಲಿ ಭಾರಿ ಜನಸಂದಣಿ ಸೇರಿರುವುದನ್ನು ಪರಿಗಣಿಸಿ ನಾವು ಆ ಪ್ರದೇಶದಲ್ಲಿ ಅನುಮತಿ ನೀಡಲಿಲ್ಲ. ಆ ಸ್ಥಳ ಇದಕ್ಕಿಂತ ಕಿರಿದಾಗಿತ್ತು. ಅವರು 10,000 ಜನರು ಬರುತ್ತಾರೆ ಎಂದು ಹೇಳಿದರು. ಆದರೆ 27,000ಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.

"ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ರ‍್ಯಾಲಿಗೆ ಅನುಮತಿ ಕೇಳಲಾಗಿತ್ತು. ವಿಜಯ್ ಮಧ್ಯಾಹ್ನ 12.30ರ ವೇಳೆಗೆ ಅಲ್ಲಿಗೆ ತಲುಪುತ್ತಾರೆ ಎಂದು ಹೇಳಿದ್ದರು. ಬೆಳಿಗ್ಗೆ 11 ಗಂಟೆಯಿಂದ ಜನಸಮೂಹ ಸೇರಲು ಪ್ರಾರಂಭಿಸಿತು. ಆದರೆ ಅವರು ಸಂಜೆ 7.40ಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಜನಸಮೂಹಕ್ಕೆ ನೀರು ಅಥವಾ ಆಹಾರ ಸಿಗಲಿಲ್ಲ. ನಾವು ಯಾರನ್ನೂ ದೂಷಿಸುತ್ತಿಲ್ಲ, ಆದರೆ ಸತ್ಯಗಳನ್ನು ಹೇಳುತ್ತಿದ್ದೇವೆ" ಎಂದು ಡಿಜಿಪಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News