ದಿಲ್ಲಿ ಬಳಿ ಬಿಹಾರದ ಕುಖ್ಯಾತ ರೌಡಿ ರಂಜನ್ ಪಾಠಕ್ ಮತ್ತು ಸಹಚರರ ಎನ್ ಕೌಂಟರ್
ರಂಜನ್ ಪಾಠಕ್ (Photo credit: indiatoday.in)
ಹೊಸದಿಲ್ಲಿ: ದಿಲ್ಲಿ ಪೊಲೀಸರ ಕ್ರೈಮ್ ಬ್ರಾಂಚ್ ಮತ್ತು ಬಿಹಾರ ಪೊಲೀಸರು ಗುರುವಾರ ಮುಂಜಾನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಕುಖ್ಯಾತ ಗ್ಯಾಂಗ್‌ಸ್ಟರ್‌ಗಳು ಹತರಾಗಿದ್ದಾರೆ.
‘ಸಿಗ್ಮಾ ಆ್ಯಂಡ್ ಕಂಪೆನಿ’ ಎಂಬ ಗ್ಯಾಂಗ್‌ಗೆ ಸೇರಿದವರಾದ ಈ ಗ್ಯಾಂಗ್‌ಸ್ಟರ್‌ಗಳು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ದೊಡ್ಡ ಕ್ರಿಮಿನಲ್ ಕಾರ್ಯಾಚರಣೆಯೊಂದನ್ನು ನಡೆಸಲು ಯೋಜನೆ ರೂಪಿಸುತ್ತಿದ್ದರು. ಹಾಗಾಗಿ ಅವರನ್ನು ಸೆರೆಹಿಡಿಯಲು ದಿಲ್ಲಿಯ ರೋಹಿಣಿಯಲ್ಲಿ ಬಲೆ ಬೀಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ನಾಲ್ವರು ಗ್ಯಾಂಗ್‌ಸ್ಟರ್‌ಗಳು ಬಿಹಾರದ ಕುಖ್ಯಾತ ರಂಜನ್ ಪಾಠಕ್ ಗ್ಯಾಂಗ್‌ನ ಸದಸ್ಯರಾಗಿದ್ದರು. ಈ ಗ್ಯಾಂಗನ್ನು ‘ಸಿಗ್ಮಾ ಆ್ಯಂಡ್ ಕಂಪೆನಿ’ ಎಂಬುದಾಗಿಯೂ ಕರೆಯಲಾಗುತ್ತದೆ. ಗ್ಯಾಂಗ್‌ನ ಮುಖ್ಯಸ್ಥ 25 ವರ್ಷದ ರಂಜನ್ ಪಾಠಕ್ ಕೂಡ ದಿಲ್ಲಿ ಎನ್‌ಕೌಂಟರ್‌ನಲ್ಲಿ ಹತರಾದವರಲ್ಲಿ ಸೇರಿದ್ದಾನೆ. ರಂಜನ್ ಸಾಮಾಜಿಕ ಮಾಧ್ಯಮ ಸಂದೇಶಗಳಲ್ಲಿ ದಿಲ್ಲಿ ಪೊಲೀಸರಿಗೆ ಸವಾಲು ಹಾಕುತ್ತಿದ್ದನು ಮತ್ತು ಅವನ ತಲೆಗೆ 25,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಹತರಾದ ಇತರ ಮೂವರನ್ನು ಬಿಮಲೇಶ್ ಮಹಾತೊ ಯಾನೆ ಬಿಮಲೇಶ್ ಸಾಹ್ನಿ (25), ಮನೀಶ್ ಪಾಠಕ್ (33) ಮತ್ತು ಅಮನ್ ಠಾಕೂರ್ (21) ಎಂಬುದಾಗಿ ಗುರುತಿಸಲಾಗಿದೆ. ಮೃತರೆಲ್ಲರೂ ಬಿಹಾರದ ಸೀತಾಮಡಿ ಜಿಲ್ಲೆಯವರು.
ಅವರು ಅಪಾಯಕಾರಿ ಕ್ರಿಮಿನಲ್‌ಗಳಾಗಿದ್ದು, ಸಶಸ್ತ್ರ ದರೋಡೆ ಮತ್ತು ಕೊಲೆಗಳು ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು ಎಂದು ಪೊಲೀಸರು ತಿಳಿಸಿದರು. ಅವರ ವಿರುದ್ಧ ಬಿಹಾರದ ದುಮ್ರ, ಚೌರತ್, ಗಹ್ರ ಮತ್ತು ಪುರ್ನಾಹಿಯ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ಈ ಗ್ಯಾಂಗ್ ಬಿಹಾರದಲ್ಲಿ ಬ್ರಹ್ಮಶ್ರೀ ಸೇನೆಯ ಜಿಲ್ಲಾ ಮುಖ್ಯಸ್ಥ ಗಣೇಶ್ ಶರ್ಮಾ, ಮದನ್ ಶರ್ಮಾ ಮತ್ತು ಆದಿತ್ಯ ಸಿಂಗ್ ಎಂಬವರನ್ನು ಕೊಂದಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗ್ಯಾಂಗ್‌ಸ್ಟರ್‌ಗಳು ಒಂದು ದೊಡ್ಡ ಕ್ರಿಮಿನಲ್ ಕಾರ್ಯಾಚರಣೆಗೆ ಯೋಜನೆ ರೂಪಿಸುತ್ತಿದ್ದರು ಹಾಗೂ ಆ ಮೂಲಕ ಮುಂಬವರು ಬಿಹಾರ ವಿಧಾನಸಭಾ ಚುನಾವಣೆಯನ್ನು ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.