×
Ad

ಎಸ್ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ ಇಂಡಿಯಾ ಒಕ್ಕೂಟದ 49 ಪಕ್ಷಗಳು

ತಮಿಳುನಾಡು ಸಿಎಂ ಸ್ಟಾಲಿನ್‌ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ

Update: 2025-11-03 16:22 IST

Photo | newindianexpress

ಹೊಸದಿಲ್ಲಿ : ಬಿಹಾರದ ನಂತರ 12 ರಾಜ್ಯಗಳಲ್ಲಿ 2ನೇ ಹಂತದ ಎಸ್ಐಆರ್ ನಡೆಸುವ ಬಗ್ಗೆ ಚುನಾವಣಾ ಆಯೋಗ ಈಗಾಗಲೇ ಘೋಷಿಸಿದೆ. ತಮಿಳುನಾಡಿನಲ್ಲಿ ಕೂಡ ನವೆಂಬರ್ 4 ರಿಂದಲೇ ಎಸ್ಐಆರ್ ಆರಂಭವಾಗಲಿದೆ. ಆದರೆ ಇದರ ಬೆನ್ನಲ್ಲೆ ತಮಿಳುನಾಡಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಸೇರಿದಂತೆ ಇಂಡಿಯಾ ಒಕ್ಕೂಟದ 49 ಪಕ್ಷಗಳು ಸಭೆ ಸೇರಿ, ಎಸ್ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿವೆ.

ಎಸ್ಐಆರ್ ಅನ್ನು ಸಂವಿಧಾನ ವಿರೋಧಿ ಎಂದಿರುವ ತಮಿಳುನಾಡು ಸರಕಾರ, 2026ರ ಚುನಾವಣೆಗೆ ಮೊದಲು ಮತದಾರರ ಮತದಾನದ ಹಕ್ಕನ್ನು ಕಸಿಯುವ ಯತ್ನ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಸಭೆಯ ಬಳಿಕ ಮಾತನಾಡಿದ ಸಿಎಂ ಎಂಕೆ ಸ್ಟಾಲಿನ್, ತಮಿಳುನಾಡಿನ ಜನರನ್ನು ಮತದಾನದ ಹಕ್ಕುಗಳಿಂದ ವಂಚಿತರನ್ನಾಗಿಸುವ ಮತ್ತು ಪ್ರಜಾಪ್ರಭುತ್ವದ ಹತ್ಯೆ ಮಾಡುವ ಗುರಿಯನ್ನು ಹೊಂದಿರುವ ಎಸ್ಐಆರ್ ವಿರುದ್ಧ ಎಲ್ಲಾ ಪಕ್ಷಗಳು ಒಗ್ಗೂಡಿ ಧ್ವನಿ ಎತ್ತುವುದು ಕರ್ತವ್ಯವಾಗಿದೆ. 2026ರ ಚುನಾವಣೆಯ ನಂತರ, ಸಾಕಷ್ಟು ಸಮಯ ತೆಗೆದುಕೊಂಡು, ಯಾವುದೇ ಸಮಸ್ಯೆಗಳಿರದಂತೆ ಎಸ್ಐಆರ್‌ ನಡೆಸಬೇಕು. ಚುನಾವಣಾ ಆಯೋಗದ ಈ ಕ್ರಮಕ್ಕೆ ನಮ್ಮ ಒಪ್ಪಿಗೆಯಿಲ್ಲ. ಅದ್ದರಿಂದ ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ 49 ಪಕ್ಷಗಳ ನಾಯಕರಿಗೆ ಕೃತಜ್ಞತೆ ಹೇಳಿರುವ ಸಿಎಂ ಎಂಕೆ ಸ್ಟಾಲಿನ್, ಸಭೆಗೆ ಹಾಜರಾಗದ ಪಕ್ಷಗಳು ಎಸ್ಐಆರ್ ಬಗ್ಗೆ ಚರ್ಚಿಸಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡು ರಾಜಕೀಯಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ಪಕ್ಷಗಳನ್ನು ಸಹ ಈ ಸಭೆಗೆ ಆಹ್ವಾನಿಸಲಾಗಿತ್ತು. ಮುಖ್ಯವಾಗಿ ದಳಪತಿ ವಿಜಯ್ ಅವರ ಪಕ್ಷವನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಹಾಜರಾಗಲಿಲ್ಲ. ಆದರೆ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡಿನಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಬಿಹಾರದಲ್ಲಿ ನಡೆದ ಎಸ್ಐಆರ್ ಸಮಯದಲ್ಲಿನ ಅಕ್ರಮಗಳು ತಮಿಳುನಾಡಿನಲ್ಲಿ ನಡೆಯಬಾರದು ಎಂದು ವಿಜಯ್ ಹೇಳಿದ್ದಾರೆ.

ತಮಿಳುನಾಡು ಮಾತ್ರವಲ್ಲದೆ, ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿಯೂ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿನ ಚುನಾವಣೆ ಬಿಜೆಪಿಗೆ ಮಾಡು ಇಲ್ಲವೆ ಮಡಿ ಚುನಾವಣೆಯಾಗಿದೆ. ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಲು ಯತ್ನಿಸಿ ಸೋಲನ್ನು ಕಂಡಿದೆ. ಈ ಬಾರಿಯಾದರೂ ಮಮತಾ ಬ್ಯಾನರ್ಜಿಯವರನ್ನು ಶತಾಯಗತಾಯ ಮಣಿಸಬೇಕೆಂಬ ಗುರಿಯನ್ನು ಬಿಜೆಪಿ ಹೊಂದಿದೆ.

ಇಡೀ ಎಸ್ಐಆರ್ ಪ್ರಕ್ರಿಯೆ ತಪ್ಪು ಎಂದು ಟಿಎಂಸಿ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ನವೆಂಬರ್ 4 ರಂದು ಎಸ್ಐಆರ್ ವಿರುದ್ಧ ಬೀದಿಗಿಳಿಯುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಟಿಎಂಸಿ ವಕ್ತಾರರೊಬ್ಬರು ಮಾತನಾಡಿ, ಎಸ್ಐಆರ್ ಹೆಸರಲ್ಲಿ ಒಂದೇ ಒಂದು ಮತವನ್ನು ಅಳಿಸಿದರೂ ನೆತ್ತರು ಹರಿಯಲಿದೆ ಎಂದು ಎಚ್ಚರಿಸಿರುವ ಬಗ್ಗೆಯೂ ವರದಿಯಾಗಿತ್ತು. ಅವರ ಹೇಳಿಕೆಗೆ ಖಂಡನೆ ಕೂಡ ವ್ಯಕ್ತವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ, ಎಸ್ಐಆರ್ ಮೂಲಕ ಮತದಾರರ ಪಟ್ಟಿಯಿಂದ ಹೊರಹಾಕುವ ಭಯವೇ ಕಾರಣ ಎಂದು ಚುನಾವಣಾ ಆಯೋಗ ಮತ್ತು ಬಿಜೆಪಿಯನ್ನು ಟಿಎಂಸಿ ಟೀಕಿಸಿತ್ತು.  

12 ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನವೆಂಬರ್ 4 ರಿಂದ ಶುರುವಾಗುತ್ತಿದೆ. ಈ ಹಂತದಲ್ಲೇ ತಮಿಳುನಾಡಿನಲ್ಲಿ ನಡೆದ ಸಭೆಯಲ್ಲಿ, 44 ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರ ತೆಗೆದುಕೊಂಡಿವೆ. ಬಿಹಾರದ ಎಸ್ಐಆರ್ ಗೆ ಸಂಬಂಧಿಸಿದ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.

ಬಿಹಾರದಲ್ಲಿ ತುರಾತುರಿಯಲ್ಲಿ ಎಸ್ ಐಆರ್ ನ್ನು ನಡೆಸಲಾಯಿತು. ಪತ್ರಿಕಾ ಪ್ರಕಟಣೆ ನೀಡಿದ ಮರುದಿನವೇ ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾಯಿತು. ಬಿಹಾರ ಚುನಾವಣೆ ವೇಳೆಯಲ್ಲೇ 12 ರಾಜ್ಯಗಳಲ್ಲಿ ಎಸ್ಐರ್ ಪ್ರಕ್ರಿಯೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News