'ಕುಲ್ಫಿ' ತಿಂದು 45 ಮಕ್ಕಳ ಸಹಿತ 85 ಮಂದಿ ಅಸ್ವಸ್ಥ; ಐಸ್ ಕ್ರೀಂ ವ್ಯಾಪಾರಿಯ ಬಂಧನ
ಸಾಂದರ್ಭಿಕ ಚಿತ್ರ (Credit: freepik.com)
ವಿಲ್ಲುಪುರಂ: ಕುಲ್ಫಿ ತಿಂದು 45 ಮಕ್ಕಳು ಸೇರಿದಂತೆ ಒಟ್ಟು 85 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಶುಕ್ರವಾರ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಲ್ಫಿ ವ್ಯಾಪಾರಿಯನ್ನು ಕಣ್ಣನ್ (45) ಎಂದು ಗುರುತಿಸಲಾಗಿದ್ದು, ಘಟನೆಯ ನಂತರ ಆತನನ್ನು ಬಂಧಿಸಲಾಗಿದೆ ಎಂದು new9live.com ವರದಿ ಮಾಡಿದೆ.
ಈ ಘಟನೆಯು ಗುರುವಾರ ತಮಿಳುನಾಡಿನ ವಿಕ್ರವಂಡಿ ಒಕ್ಕೂಟದ ಮುತ್ತತ್ತೂರು ಗ್ರಾಮದಲ್ಲಿ ನಡೆದಿದೆ.
ಐಸ್ ಕ್ರೀಂ ವ್ಯಾಪಾರಿಯೊಬ್ಬರ ಬಳಿ ಕುಲ್ಫಿ ತಿಂದ ಬಳಿಕ ವಾಂತಿ ಹಾಗೂ ಹೊಟ್ಟೆ ನೋವಿಗೆ ತುತ್ತಾಗಿರುವ ಸುಮಾರು 45 ಮಕ್ಕಳನ್ನು ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಮುಂಡಿಯಾಮ್‍ಪಾಕ್ಕಮ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕುಲ್ಫಿಯ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಐಸ್ ಕ್ರೀಂನಲ್ಲೇನಾದರೂ ಮತ್ತಿನ ಪದಾರ್ಥ ಸೇರಿಸಲಾಗಿತ್ತೆ ಅಥವಾ ಕೆಟ್ಟು ಹೋಗಿರುವ ಐಸ್ ಕ್ರೀಂ ಮಕ್ಕಳಿಗೆ ನೀಡಲಾಗಿತ್ತೆ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.