×
Ad

ಅಮೆರಿಕದಿಂದ ಶೇಕಡ 50 ಸುಂಕ: ಯಾವೆಲ್ಲ ಕ್ಷೇತ್ರಗಳಿಗೆ ಹಾನಿ?

Update: 2025-08-07 07:38 IST

PC: PTI

ಹೊಸದಿಲ್ಲಿ: ಭಾರತದ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಚರ್ಮ, ರಾಸಾಯನಿಕ, ಪಾದರಕ್ಷೆ, ಹರಳು ಮತ್ತು ಆಭರಣ, ಜವಳಿ ಮತ್ತು ಸಿಗಡಿ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಶೇಕಡ 25ರಷ್ಟು ಸುಂಕ ವಿಧಿಸಿದ್ದ ಟ್ರಂಪ್, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವುದಕ್ಕೆ ದಂಡನಾತ್ಮಕವಾಗಿ ಬುಧವಾರ ಹೆಚ್ಚುವರಿ ಶೇಕಡ 25ರಷ್ಟು ಸುಂಕ ವಿಧಿಸಿದ್ದರು. ಭಾರತದ ಮೇಲೆ ಮಾತ್ರ ಈ ದಂಡನಾ ಸುಂಕ ವಿಧಿಸಿದ್ದು, ರಷ್ಯಾದಿಂದ ತೈಲ ಖರೀದಿಸುವ ಚೀನಾ ಮತ್ತು ಟರ್ಕಿಯಂಥ ದೇಶಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಸುಂಕದಿಂದಾಗಿ ಭಾರತೀಯ ಸರಕುಗಳು ಅಮೆರಿಕದಲ್ಲಿ ದುಬಾರಿಯಾಗಲಿದ್ದು, ಅಮೆರಿಕಕ್ಕೆ ಆಗುತ್ತಿರುವ ರಫ್ತಿನ ಪ್ರಮಾಣ ಶೇಕಡ 40-50ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಜಿಟಿಆರ್‌ಐ ವಿಚಾರ ವೇದಿಕೆ ಅಭಿಪ್ರಾಯಪಟ್ಟಿದೆ.

ಹೊಸ ಸುಂಕದ ಬಳಿಕ ಜೈವಿಕ ರಾಸಾಯನಿಕ ರಫ್ತಿನ ಮೇಲೆ ಹೆಚ್ಚುವರಿ ಶೇಕಡ 54ರಷ್ಟು ಸುಂಕ ವಿಧಿಕೆಯಾಗಲಿದೆ. ಇದರ ಜತೆಗೆ ಕಂಬಳಿ (52.9%), ಸಿದ್ಧ ಉಡುಪು (ಶೇಕಡ 63.9), ಜವಳಿ (ಶೇ. 59), ವಜ್ರ, ಚಿನ್ನ ಮತ್ತು ಇತರ ಉತ್ಪನ್ನಗಳು (ಶೇ. 52.1) ಕೂಡಾ ಅಧಿಕ ಸುಂಕ ಎದುರಿಸಬೇಕಾಗುತ್ತವೆ. ಯಂತ್ರೋಪಕರಣ ಮತ್ತು ಮೆಕ್ಯಾನಿಕಲ್ ಸಾಧನಗಳು (51.3), ಪೀಠೋಪಕರಣ, ಹಾಸಿಗೆ ಮತ್ತು ದಿಂಬು (52.3) ಕೂಡಾ ಈ ವರ್ಗದಲ್ಲಿ ಸೇರಿವೆ.

ಜುಲೈ 31ರಂದು ಪ್ರಕಟಿಸಿದ ಶೇಕಡ 25ರಷ್ಟು ಸುಂಕ ಆಗಸ್ಟ್ 7ರಿಂದ ಜಾರಿಗೆ ಬರಲಿದೆ. ಹೆಚ್ಚುವರಿ ಸುಂಕ ಆಗಸ್ಟ್ 27ರಿಂದ ಜಾರಿಯಾಗಲಿದೆ. 2024-25ರಲ್ಲಿ ಅಮೆರಿಕ ಮತ್ತು ಭಾರತ ನಡುವಿನ ದ್ವಿಪಕ್ಷೀಯ ವಹಿವಾಟು 131.8 ಶತಕೋಟಿ ಡಾಲರ್ ಆಗಿದ್ದು, ಭಾರತ ರಫ್ತಿನಿಂದ 86.5 ಶತಕೋಟಿ ಡಾಲರ್ ಆದಾಯ ಗಳಿಸಿದರೆ, ಆಮದು ಮೌಲ್ಯ 45.3 ಶತಕೋಟಿ ಡಾಲರ್‌ಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News