×
Ad

ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ಉತ್ತರ ಪ್ರದೇಶದ 5 ಸಾವಿರಕ್ಕೂ ಅಧಿಕ ಮತದಾರರು!

'ದಿ ರಿಪೋರ್ಟರ್ಸ್ ಕಲೆಕ್ಟಿವ್' ತನಿಖೆಯಿಂದ ಬಹಿರಂಗ

Update: 2025-08-12 10:30 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಈಗಾಗಲೇ ಮತದಾರರ ಚೀಟಿ ಹೊಂದಿರುವ ಸಾವಿರಾರು ಜನರನ್ನು, ಬಿಹಾರದ ವಾಲ್ಮೀಕಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಕರಡು ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ನಡೆಸಿರುವ ತನಿಖೆಯೊಂದು ಬೆಳಕಿಗೆ ತಂದಿದೆ. ಆಯುಷಿ ಕಾರ್, ಹರ್ಷಿತಾ ಮಾನ್ವಾನಿ ಮತ್ತು ಗಾಯತ್ರಿ ಸಪ್ರು ಅವರು ಈ ತನಿಖಾ ವರದಿಯನ್ನು ಸಿದ್ಧಪಡಿಸಿದ್ದಾರೆ.

'ದಿ ರಿಪೋರ್ಟರ್ಸ್ ಕಲೆಕ್ಟಿವ್' ವರದಿಯ ಪ್ರಕಾರ, ಉತ್ತರ ಪ್ರದೇಶದ 1,000ಕ್ಕೂ ಹೆಚ್ಚು ಮತದಾರರು ಬಿಹಾರದ ವಾಲ್ಮೀಕಿನಗರ ಕ್ಷೇತ್ರದ ಹೊಸ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿರುವುದು ಕಂಡುಬಂದಿದೆ. ಆಶ್ಚರ್ಯಕರವಾಗಿ, ಅವರ ವಿವರಗಳು ಎರಡೂ ರಾಜ್ಯಗಳ ಪಟ್ಟಿಗಳಲ್ಲಿಯೂ ಒಂದೇ ಆಗಿವೆ. ಇದಲ್ಲದೆ, ಇನ್ನೂ ಸಾವಿರಾರು ಜನರು ಬಿಹಾರ ಮತ್ತು ಉತ್ತರ ಪ್ರದೇಶದ ಪಟ್ಟಿಗಳಲ್ಲಿ ಸಣ್ಣಪುಟ್ಟ ವಿವರಗಳ ಬದಲಾವಣೆಯೊಂದಿಗೆ ಸೇರ್ಪಡೆಯಾಗಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ. ಇವರೆಲ್ಲರನ್ನೂ ಸೇರಿಸಿದರೆ, 5,000ಕ್ಕೂ ಹೆಚ್ಚು ಸಂಶಯಾಸ್ಪದ, ನಕಲಿ ಅಥವಾ ದ್ವಿಗುಣ ಮತದಾರರಾಗುತ್ತಾರೆ. ಇವರೆಲ್ಲರೂ ಎರಡೂ ರಾಜ್ಯಗಳಲ್ಲಿ ಎರಡು ವಿಭಿನ್ನ ಚುನಾವಣಾ ಗುರುತಿನ ಚೀಟಿ (EPIC) ಸಂಖ್ಯೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದು ಕಾನೂನುಬಾಹಿರವಾಗಿದ್ದು, ಅಕ್ರಮ ಮತದಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವರದಿ ಎಚ್ಚರಿಸಿದೆ.

ದೇಶದ ಕಾನೂನಿನ ಪ್ರಕಾರ, ಓರ್ವ ಮತದಾರ ಎರಡು EPIC ಸಂಖ್ಯೆಗಳನ್ನು ಹೊಂದುವುದು ಅಪರಾಧ. ಚುನಾವಣಾ ಆಯೋಗವು (ECI) ಪ್ರತಿ ಅರ್ಹ ಮತದಾರನ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ, ಅವರಿಗೆ ಒಂದು ವಿಶಿಷ್ಟ EPIC ಸಂಖ್ಯೆಯನ್ನು ನೀಡಬೇಕಾಗುತ್ತದೆ.

ತನಿಖಾ ವರದಿಯ ಪ್ರಕಾರ, 1,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಿಖರವಾದ ಹೋಲಿಕೆಗಳು ಕಂಡುಬಂದಿವೆ. ಮತದಾರರ ಹೆಸರು, ವಯಸ್ಸು ಮತ್ತು ಸಂಬಂಧಿಕರ ಹೆಸರು ಎರಡೂ ರಾಜ್ಯಗಳ ಡೇಟಾಬೇಸ್‌ ಗಳಲ್ಲಿ ಒಂದೇ ಆಗಿದ್ದರೆ, ವಿಳಾಸಗಳು ಮಾತ್ರ ಬೇರೆಯಾಗಿದ್ದವು ಎಂದು ವರದಿ ತಿಳಿಸಿದೆ.

ಇನ್ನೂ ಸಾವಿರಾರು ಪ್ರಕರಣಗಳಲ್ಲಿ, ಮತದಾರರ ಅಥವಾ ಅವರ ಸಂಬಂಧಿಕರ ಹೆಸರಿನ ಕಾಗುಣಿತದಲ್ಲಿ (spelling) 1-3 ಅಕ್ಷರಗಳನ್ನು ಬದಲಾಯಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ, ವಯಸ್ಸನ್ನು 1-4 ವರ್ಷಗಳಷ್ಟು ಬದಲಾಯಿಸಲಾಗಿದ್ದು, ಉಳಿದ ವಿವರಗಳು ಹೋಲಿಕೆಯಾಗಿವೆ.

ವರದಿಯ ಪ್ರಕಾರ, 1,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಎರಡು ರಾಜ್ಯಗಳಲ್ಲಿಯೂ ಇದ್ದಂತೆ ಇರುವ ವಿವರಗಳು ಕಂಡುಬಂದಿವೆ. ಮತದಾರರ ಹೆಸರು, ವಯಸ್ಸು, ಹಾಗೂ ಸಂಬಂಧಿಕರ ಹೆಸರು ಎರಡೂ ರಾಜ್ಯಗಳ ಪಟ್ಟಿಗಳಲ್ಲೂ ಒಂದೇ ಇದ್ದು, ವಿಳಾಸ ಮಾತ್ರ ಬದಲಾಗಿದೆ. ಉಳಿದ ಉಳಿದವುಗಳಲ್ಲಿ ಅಕ್ಷರದ ಸಣ್ಣ ಬದಲಾವಣೆಗಳು ಅಥವಾ ವಯಸ್ಸಿನ ಅಲ್ಪ ವ್ಯತ್ಯಾಸಗಳೇ ಇದ್ದರೂ, ಇತರ ವಿವರಗಳು ಹೋಲಿಕೆಯಾಗಿವೆ.

ಇಲ್ಲಿ ಕೆಲವು ಉದಾಹರಣೆಗಳನ್ನು ಗಮನಿಸಬಹುದು. 45 ವರ್ಷ ಪ್ರಾಯದ ಛೆಡಿ ರಾಮ ಅವರ ಇಪಿಐಸಿ ಸಂಖ್ಯೆಗಳು ಭಿನ್ನವಾಗಿವೆ. ಆದರೆ, ಅವರ ಇತರ ವಿವರಗಳು ರಾಜ್ಯಗಳಲ್ಲಿ ಸಂಪೂರ್ಣವಾಗಿ ಹೋಲಿಕೆಯಾಗುತ್ತವೆ. ಅದೇ ರೀತಿ ಉತ್ತರಪ್ರದೇಶದಲ್ಲಿ ಶಬನಮ್ ಖಾತುನ್ ಇದ್ದರೆ, ಬಿಹಾರದಲ್ಲಿ ಶಬನಮ್ ಖಾತೂನ್ ಇದೆ. ಇಲ್ಲಿ ಸಣ್ಣ ಅಕ್ಷರ ಹಾಗೂ ವಯಸ್ಸಿನ ವ್ಯತ್ಯಾಸಗಳು ಮಾತ್ರ ಇವೆ. ಹೀರಾಲಾಲ್ ಕುಶ್ವಾಹ ಹೆಸರು ಹೀರಾಮಾನ್ ಕುಶ್ವಾಹ ಆಗಿದೆ.

'ದಿ ರಿಪೋರ್ಟರ್ಸ್ ಕಲೆಕ್ಟಿವ್', ಬಿಹಾರದ ಹೊಸ ಕರಡು ಮತದಾರರ ಪಟ್ಟಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಡೇಟಾ ವಿಶ್ಲೇಷಕರ ಸಹಾಯದಿಂದ ಈ ತನಿಖೆಯನ್ನು ನಡೆಸಿದೆ. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ವಾಲ್ಮೀಕಿನಗರದಿಂದ ತಮ್ಮ ತನಿಖೆಯನ್ನು ಪ್ರಾರಂಭಿಸಿರುವುದಾಗಿ ಕಲೆಕ್ಟಿವ್ ಹೇಳಿದೆ.

ವಾಲ್ಮೀಕಿನಗರದ ಈ ಸಂಶೋಧನೆಗಳು, ಚುನಾವಣಾ ಆಯೋಗದ ಒಂದು ಪ್ರಮುಖ ಹೇಳಿಕೆಯ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತವೆ. ವಲಸೆ ಮತ್ತು ಅಕ್ರಮ ವಲಸಿಗರಂತಹ ಸಮಸ್ಯೆಗಳಿಂದ ಬಿಹಾರದ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು "ವಿಶೇಷ ತೀವ್ರ ಪರಿಷ್ಕರಣೆ"ಯನ್ನು ನಡೆಸಲಾಗುತ್ತಿದೆ ಎಂದು ಆಯೋಗವು ಈ ಹಿಂದೆ ಹೇಳಿಕೊಂಡಿತ್ತು.

ಉತ್ತರ ಪ್ರದೇಶ ಮತ್ತು ಬಿಹಾರದ ಪಟ್ಟಿಗಳಲ್ಲಿರುವ ಈ ಸಾವಿರಾರು ದ್ವಿಗುಣ ಮತದಾರರು, ಅಕ್ರಮವಾಗಿ ಎರಡು ಗುರುತಿನ ಚೀಟಿ ಹೊಂದಿರುವ ನಿಜವಾದ ವ್ಯಕ್ತಿಗಳೇ? ಅಥವಾ ಸಂಪೂರ್ಣವಾಗಿ ನಕಲಿ ವ್ಯಕ್ತಿಗಳೇ? ಎಂಬ ಪ್ರಶ್ನೆಯನ್ನು ವರದಿಯು ಹುಟ್ಟುಹಾಕಿದೆ. ಇವರು ಬಿಹಾರದ ಮತದಾರರ ಪಟ್ಟಿಗೆ ಹೊಸದಾಗಿ ಸೇರಿದ್ದಾರೆಯೇ? ಅಥವಾ ಹಿಂದಿನಿಂದಲೂ ಇದ್ದು, ಈ ಬಾರಿ ಅವರನ್ನು ತೆಗೆದುಹಾಕಲು ಚುನಾವಣಾ ಆಯೋಗ ವಿಫಲವಾಗಿದೆಯೇ? ಎಂಬುದನ್ನು ಪತ್ತೆ ಹಚ್ಚಬೇಕಿದೆ.

ಈ ಪ್ರಶ್ನೆಗಳಿಗೆ ಉತ್ತರ ಸಿಗಲು ವ್ಯಾಪಕವಾದ ಕ್ಷೇತ್ರ ಪರಿಶೀಲನೆಯ ಅಗತ್ಯವಿದೆ ಎಂದು ವರದಿ ಹೇಳುತ್ತದೆ. ಆದರೆ, ಸುಪ್ರೀಂ ಕೋರ್ಟ್ ಮತ್ತು ನಾಗರಿಕರಿಗೆ ನೀಡಿದ ಭರವಸೆಯ ಹೊರತಾಗಿಯೂ, ಬಿಹಾರದ ಹೊಸ ಕರಡು ಪಟ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಶಯಾಸ್ಪದ ಮತ್ತು ದ್ವಿಗುಣ ಮತದಾರರು ಇರುವುದನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್'ನ ತನಿಖಾ ವರದಿ ತೋರಿಸಿದೆ.

ಈ ಕುರಿತು ದಿಲ್ಲಿಯಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮತ್ತು ಬಿಹಾರ ಕಚೇರಿಗೆ ಲಿಖಿತ ಪ್ರಶ್ನೆಗಳನ್ನು ಕಳುಹಿಸಿದ್ದರೂ, ಎರಡೂ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ತಿಳಿಸಿದೆ. ಆದರೆ, ಚುನಾವಣಾ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಶೋಕ್ ಗೋಯಲ್ ಅವರು ಫೋನ್‌ನಲ್ಲಿ, "ಏನೇ ವ್ಯತ್ಯಾಸಗಳಿದ್ದರೂ, ಆಕ್ಷೇಪಣೆ ಮತ್ತು ಹಕ್ಕು ಸಲ್ಲಿಕೆಯ ಅವಧಿ ಇನ್ನೂ ಜಾರಿಯಲ್ಲಿದೆ," ಎಂದು ಪ್ರತಿಕ್ರಿಯಿಸಿದ್ದಾರೆ.

ಇದೊಂದು ಕರಡು ಪಟ್ಟಿಯಷ್ಟೇ ಎಂಬ ಅಧಿಕಾರಿಯ ಮಾತು ಸರಿಯಾಗಿಯೇ ಇದೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಆದರೆ, 'ದಿ ರಿಪೋರ್ಟರ್ಸ್ ಕಲೆಕ್ಟಿವ್'ನ ವಿಶ್ಲೇಷಣೆಯ ಪ್ರಕಾರ, ವಿಧಾನಸಭಾ ಚುನಾವಣೆಗೆ ಮುನ್ನ ಇಂತಹ ಸಾವಿರಾರು ಸಂಶಯಾಸ್ಪದ ಮತದಾರರನ್ನು ತೆಗೆದುಹಾಕುವುದು ಕಾರ್ಯಾಚರಣೆಯ ದೃಷ್ಟಿಯಿಂದ ಅತ್ಯಂತ ಕಷ್ಟಕರವಾಗಿದೆ.

ಹೊಸ ಕರಡು ಮತದಾರರ ಪಟ್ಟಿಯಲ್ಲಿರುವ ಬಹುತೇಕ ಹೆಸರುಗಳಿಗೆ ಪೂರಕ ದಾಖಲೆಗಳಿಲ್ಲ. ಆಯೋಗದ ನಿಯಮಗಳ ಪ್ರಕಾರ, ನಕಲಿ ಮತದಾರರು ಸ್ವತಃ ಜಿಲ್ಲಾ ಅಧಿಕಾರಿಗಳ ಬಳಿ ಹೋಗಿ ತಮ್ಮ ಹೆಸರುಗಳನ್ನು ತೆಗೆದುಹಾಕಿಸಲು ಮನವಿ ಮಾಡಬೇಕು.

ಜೂನ್ 24 ರಂದು, ಚುನಾವಣಾ ಆಯೋಗವು ಬಿಹಾರದ ಮತದಾರರ ಪಟ್ಟಿಯನ್ನು 90 ದಿನಗಳಲ್ಲಿ ಸಂಪೂರ್ಣವಾಗಿ ಪರಿಷ್ಕರಿಸಲು ಆದೇಶಿಸಿತ್ತು. ಮೃತ, ನಕಲಿ ಮತ್ತು ವಲಸೆ ಹೋದ ಮತದಾರರನ್ನು ತೆಗೆದುಹಾಕುವುದೇ ಇದರ ಉದ್ದೇಶ ಎಂದು ಹೇಳಲಾಗಿತ್ತು. ಆದರೆ, ಈ ಪ್ರಕ್ರಿಯೆ ಆರಂಭದಲ್ಲೇ ಗೊಂದಲಕ್ಕೆ ಈಡಾಯಿತು ಎಂದು ವರದಿಯು ವಿಶ್ಲೇಷಿಸಿದೆ.

'ದಿ ರಿಪೋರ್ಟರ್ಸ್ ಕಲೆಕ್ಟಿವ್' ಈ ಅಕ್ರಮಗಳನ್ನು ಪತ್ತೆ ಹಚ್ಚಲು, ಚುನಾವಣಾ ಆಯೋಗದ ವೆಬ್‌ ಸೈಟ್‌ನಲ್ಲಿದ್ದ ಸ್ಕ್ಯಾನ್ ಮಾಡಿದ ಪಟ್ಟಿಗಳನ್ನು ಓದಬಲ್ಲ ಡೇಟಾ ಆಗಿ ಪರಿವರ್ತಿಸಲು ವಿಶೇಷ ತಂತ್ರಜ್ಞಾನವನ್ನು ಬಳಸಿದೆ. ಬಿಹಾರದ ಗಡಿ ಹಂಚಿಕೊಳ್ಳುವ ಉತ್ತರ ಪ್ರದೇಶದ ಸಿಸ್ವಾ, ಪಡ್ರೌನಾ, ಮತ್ತು ಖಡ್ಡಾ ಕ್ಷೇತ್ರಗಳ ಪಟ್ಟಿಗಳೊಂದಿಗೆ ವಾಲ್ಮೀಕಿನಗರದ ಪಟ್ಟಿಯನ್ನು ಹೋಲಿಕೆ ಮಾಡಿ ಈ ಅಧ್ಯಯನ ನಡೆಸಲಾಗಿದೆ.

ಎ ಐ ಬಳಸಿ ನಡೆಸಿದ ತನಿಖೆಯಲ್ಲಿ ಕಂಡುಬಂದಂತೆ, ಮೂರು ಮಾನದಂಡಗಳಲ್ಲಿ (ಹೆಸರು, ವಯಸ್ಸು, ಸಂಬಂಧಿಕರ ಹೆಸರು) ಸಂಪೂರ್ಣವಾಗಿ ಹೋಲಿಕೆಯಾಗುವ ಪಟ್ಟಿಯು 85% ದಷ್ಟು ನಿಖರವಾಗಿದೆ. 1-2 ಅಕ್ಷರಗಳ ಸಣ್ಣ ಬದಲಾವಣೆಗಳಿರುವ ಪಟ್ಟಿ ಕೂಡ 85% ದಷ್ಟು ನಿಖರವಾಗಿದೆ. 2-3 ಅಕ್ಷರಗಳ ಸಣ್ಣ ಬದಲಾವಣೆಗಳಿರುವ ಪಟ್ಟಿ 70% ದಷ್ಟು ನಿಖರವಾಗಿದೆ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ದೃಢಪಡಿಸಿದೆ.

"ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡ ಗೊಂದಲದಲ್ಲಿ ಸಿಲುಕಿದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವೃತ್ತ ಚುನಾವಣಾ ಆಯುಕ್ತರೊಬ್ಬರು 'ದಿ ರಿಪೋರ್ಟರ್ಸ್ ಕಲೆಕ್ಟಿವ್'ಗೆ ತಿಳಿಸಿದ್ದಾರೆ. "ಕೇವಲ 30 ದಿನಗಳಲ್ಲಿ ಕೋಟ್ಯಂತರ ಜನರ ದಾಖಲೆಗಳನ್ನು ಪರಿಶೀಲಿಸುವುದು ಅಸಾಧ್ಯ. ಹೀಗಾಗಿ ಅಧಿಕಾರಿಗಳು ಪಟ್ಟಿಗಳನ್ನು ಇದ್ದ ಹಾಗೆಯೇ ಬಿಡುವ ಸಾಧ್ಯತೆ ಹೆಚ್ಚು," ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಪೂರ್ಣಗೊಳಿಸುತ್ತಿದ್ದಂತೆ, ಈ 5,000ಕ್ಕೂ ಹೆಚ್ಚು ಸಂಶಯಾಸ್ಪದ ಮತದಾರರ ಭವಿಷ್ಯ ಏನಾಗುತ್ತದೆ ಎಂಬುದನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಗಮನಿಸುತ್ತಲೇ ಇರುವುದಾಗಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News