ಟ್ರಂಪ್ ಸುಂಕದಿಂದ ಶೇ.55ರಷ್ಟು ರಫ್ತುಗಳ ಮೇಲೆ ಪರಿಣಾಮ: ಕೇಂದ್ರ
ಡೊನಾಲ್ಡ್ ಟಂಪ್ | PC : PTI
ಹೊಸದಿಲ್ಲಿ,ಆ.11: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಶೇ.55ರಷ್ಟು ಸರಕುಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟಂಪ್ ಹೇರಿರುವ ಶೇ.50ರಷ್ಟು ಪ್ರತಿಸುಂಕವು ಪರಿಣಾಮ ಬೀರಿದೆ ಎಂದು ಕೇಂದ್ರ ಸರಕಾರವು ಸೋಮವಾರ ಸಂಸತ್ತಿನಲ್ಲಿ ತಿಳಿಸಿದೆ.
ಸಹಾಯಕ ವಿತ್ತಸಚಿವ ಪಂಕಜ ಚೌಧರಿಯವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ,‘ಸರಕಾರವು ರೈತರು,ಉದ್ಯಮಿಗಳು, ರಫ್ತುದಾರರು ಮತ್ತು ಎಂಎಸ್‌ಎಂಇಗಳ ಹಿತಾಸಕ್ತಿ ರಕ್ಷಣೆಗೆ ಮತ್ತು ಉತ್ತೇಜನಕ್ಕೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಸುಭದ್ರಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ತಿಳಿಸಿದರು.
ಉತ್ಪನ್ನಗಳ ವ್ಯತ್ಯಾಸ, ಬೇಡಿಕೆ, ಗುಣಮಟ್ಟ ಮತ್ತು ಒಪ್ಪಂದದ ವ್ಯವಸ್ಥೆಗಳು ಸೇರಿದಂತೆ ವಿವಿಧ ಅಂಶಗಳ ಸಂಯೋಜನೆಯು ಭಾರತದ ರಫ್ತುಗಳ ಮೇಲೆ ಟ್ರಂಪ್ ಸುಂಕದ ಪರಿಣಾಮವನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
ಭಾರತೀಯ ಸರಕುಗಳ ಮೇಲೆ ಅಮೆರಿಕದ ಪ್ರತಿಸುಂಕ ಬೆದರಿಕೆಯ ಪರಿಣಾಮದ ಬಗ್ಗೆ ಸರಕಾರವು ಯಾವುದೇ ಮೌಲ್ಯಮಾಪನ ಮಾಡಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.