×
Ad

ಪಾಕ್ ತಂಡದ ಗೆಲುವಿಗೆ ಸಂಭ್ರಮಿಸಿದ ಆರೋಪ: 6 ವರ್ಷಗಳ ಬಳಿಕ 17 ಮಂದಿ ದೋಷಮುಕ್ತ

Update: 2024-03-20 14:05 IST

Photo: article-14.com

ಹೊಸದಿಲ್ಲಿ: ಜೂನ್‌ 2017ರಲ್ಲಿ ಕ್ರಿಕೆಟ್‌ ಪಂದ್ಯವೊಂದರಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಆರೋಪವನ್ನು 17 ಮುಸ್ಲಿಂ ವ್ಯಕ್ತಿಗಳು ಮತ್ತು ಇಬ್ಬರು ಅಪ್ರಾಪ್ತರು ಎದುರಿಸಿದ ಆರು ವರ್ಷಗಳ ನಂತರ ಮಧ್ಯ ಪ್ರದೇಶದ ನ್ಯಾಯಾಲಯವೊಂದು ಅವರ ವಿರುದ್ಧದ ಆರೋಪ ಸುಳ್ಳು ಎಂದು ಅವರನ್ನು ದೋಷಮುಕ್ತಗೊಳಿಸಿದೆ. ಸುಳ್ಳು ಹೇಳಿಕೆ ನೀಡುವಂತೆ ಪೊಲೀಸರು ತಮ್ಮನ್ನು ಬಲವಂತಪಡಿಸಿದ್ದರು ಎಂದು ಈ ಪ್ರಕರಣದ ಹಿಂದು ದೂರುದಾರ ಹಾಗೂ ಸರ್ಕಾರಿ ಸಾಕ್ಷಿಗಳು ಹೇಳಿದ್ದರು . ಅಕ್ಟೋಬರ್‌ 2023ರಂದು ಬಿಡುಗಡೆಗೊಂಡ ಈ ಜನರು ಕಸ್ಟಡಿಯಲ್ಲಿರುವಾಗ ಪೊಲೀಸರು ತಮಗೆ ಥಳಿಸಿ ನಿಂದಿಸಿದ್ದರು ಎಂದು ಆರೋಪಿಸಿದ್ದಾರೆ. ಅವರ ವಿರುದ್ಧದ ಆರೋಪ ನಿರಾಧಾರವೆಂದು ಕೋರ್ಟ್ ನೀಡಿದ‌ ತೀರ್ಪು ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣ ನಡೆದಾಗ ವ್ಯಾಪಕ ಸುದ್ದಿಯಾಗಿದ್ದರೆ ಕೋರ್ಟ್‌ ತೀರ್ಪು ಬಂದಾಗ ಯಾವುದೇ ಮಾಧ್ಯಮಗಳು ಅದಕ್ಕೆ ಹೆಚ್ಚಿನ ಗಮನ ನೀಡಿಲ್ಲ ಎಂದು article-14.com ವರದಿ ಮಾಡಿದೆ.

ಜೂನ್‌ 18 2017ರಲ್ಲಿ ಲಂಡನ್‌ನ ಓವಲ್‌ ಸ್ಟೇಡಿಯಂನಲ್ಲಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನದೆದುರು ಸೋತಾಗ ಮಧ್ಯ ಪ್ರದೇಶದ ಮೊಹಾಡ್‌ ಜಿಲ್ಲೆಯ ಕೆಲ ಜನರು ಪಾಕ್‌ ಪರ ಘೋಷಣೆಗಳನ್ನು ಮೊಳಗಿಸಿ, ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು ಎಂದು ಆರೋಪಿಸಲಾಗಿತ್ತು.

ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ಹಾಗೂ ಕ್ರಿಮಿನಲ್‌ ಸಂಚು ಪ್ರಕರಣ ದಾಖಲಿಸಲಾಗಿತ್ತು. ಆದರೆ ಮುಂದೆ ಪ್ರಕರಣ ಮುಂದುವರಿಸಲು ಪೊಲೀಸರು ಕಷ್ಟಪಟ್ಟಾಗ ದೇಶದ್ರೋಹ ಪ್ರಕರಣ ಕೈಬಿಟ್ಟು ವಿವಿಧ ಸಮುದಾಯಗಳ ನಡುವೆ ದ್ವೇಷ ಹರಡುವ ಆರೋಪ ಹೊರಿಸಲಾಗಿತ್ತು. ತನ್ನ ಗ್ರಾಮದ ಮುಸ್ಲಿಂ ಜನರ ವಿರುದ್ಧ ತಾನು ಯಾವುದೇ ಆರೋಪ ಮಾಡಿಲ್ಲ ಎಂದು ಹಿಂದೂ ದೂರುದಾರ ಹೇಳಿದ್ದರೂ ಪೊಲೀಸರು ಪ್ರಕರಣ ಮುಂದುವರಿಸಲು ಬಯಸಿದ್ದರು ಎಂದು ವರದಿಯಾಗಿದೆ.

ಈ ಪ್ರಕರಣ ನಡೆದು ಆರು ವರ್ಷಗಳ ನಂತರ ನ್ಯಾಯಾಲಯ 16 ಮುಸ್ಲಿಂ ವ್ಯಕ್ತಿಗಳನ್ನು (ಅವರಲ್ಲೊಬ್ಬಾತ 2019ರಲ್ಲಿ ಆತ್ಮಹತ್ಯೆಗೈದಿದ್ದರು) ದೋಷಮುಕ್ತಗೊಳಿಸಿದೆ. ಆರೋಪಿಗಳಲ್ಲಿ ಒಬ್ಬರಾದ ರುಬಾಬ್ ನವಾಬ್ ಅವಮಾನ ತಾಳಲಾರದೆ ೨೦೧೯ ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತ್ನಿ ಹಾಗು ಇಬ್ಬರು ಮಕ್ಕಳಿದ್ದಾರೆ.

ಈ ಪ್ರಕರಣದ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಾಲನ್ಯಾಯಾಲಯವು ಜೂನ್‌ 2022ರಲ್ಲಿ ದೋಷಮುಕ್ತಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News