×
Ad

ಮಹಾ ಕುಂಭ ಮೇಳಕ್ಕೆ ಆಗಮಿಸಿದ್ದ 900 ಭಕ್ತಾದಿಗಳು ನಾಪತ್ತೆಯಾಗಿದ್ದಾರೆ: ಅಖಿಲೇಶ್ ಯಾದವ್ ಆರೋಪ

Update: 2025-03-17 21:45 IST

ಅಖಿಲೇಶ್ ಯಾದವ್ | PTI 

ಲಕ್ನೊ: ಮಹಾ ಕುಂಭ ಮೇಳದಲ್ಲಿ ನಾಪತ್ತೆಯಾಗಿದ್ದ ಸುಮಾರು 900 ಭಕ್ತಾದಿಗಳು ಇನ್ನೂ ಪತ್ತೆಯಾಗಬೇಕಿದ್ದು, ಈ ಕುರಿತ ಹಾಲಿ ಸ್ಥಿತಿಯ ಮಾಹಿತಿಯನ್ನು ಅವರ ಕುಟುಂಬಗಳಿಗೆ ನೀಡಬೇಕು ಎಂದು ಅಖಿಲೇಶ್ ಯಾದವ್ ಸರಕಾರಕ್ಕೆ ಸವಾಲು ಹಾಕಿದರು.

ರವಿವಾರ ನಡೆದ ಮಹೋಬಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನೂ ತರಾಟೆಗೆ ತೆಗೆದುಕೊಂಡರು. ಮಹಾ ಕುಂಭ ಮೇಳಕ್ಕೆ ಆಗಮಿಸಿದ್ದ ಭಕ್ತಾದಿಗಳನ್ನು ಮಹಾ ಕುಂಭ ಮೇಳ ಸ್ಥಳಕ್ಕೆ ಕರೆದೊಯ್ಯಲು ನಾಲ್ಕು ಲಕ್ಷ ಬೈಕ್ ಸವಾರರನ್ನು ಬಳಸಿಕೊಳ್ಳಲಾಗಿತ್ತು ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ವ್ಯಂಗ್ಯವಾಡಿದ ಅವರು, ಸರಕಾರವೇನಾದರೂ ಆ ಬೈಕ್ ಸವಾರರಿಗೆ ಉದ್ಯೋಗ ಒದಗಿಸುವ ಯೋಜನೆ ಹೊಂದಿದೆಯೆ? ಎಂದು ಛೇಡಿಸಿದರು.

ಈಗಲೂ ಆಸ್ಪತ್ರೆಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಪತ್ತೆಯಾಗಿರುವ 900ಕ್ಕೂ ಹೆಚ್ಚು ಮಂದಿಯ ಭಿತ್ತಿಚಿತ್ರಗಳನ್ನು ನೋಡಬಹುದಾಗಿದೆ ಎಂದು ಅವರು ಆರೋಪಿಸಿದರು.

“ನಮ್ಮ ಮುಖ್ಯಮಂತ್ರಿಗಳು ವಿಸ್ಮಯಕರ ವ್ಯಕ್ತಿಯಾಗಿದ್ದಾರೆ. ಬೈಕ್ ಗಳನ್ನು ಹೊಂದಿರುವ ನಾಲ್ಕು ಲಕ್ಷ ಯುವಕರಿಗೆ ಉದ್ಯೋಗ ಒದಗಿಸಲಾಗಿತ್ತು ಎಂದು ಅವರು ಹೇಳುತ್ತಾರೆ. ಹಾಗಾದರೆ, ಬೈಕ್ ಗಳಿಂದ ವ್ಯಾಪಾರಕ್ಕೆ ಅವಕಾಶ ನೀಡಲು ನೀವು ಯಾವ ವ್ಯಾವಹಾರಿಕ ಮಾರ್ಗಗಳನ್ನು ಅಳವಡಿಸಿಕೊಂಡಿದ್ದಿರಿ? ಇದರರ್ಥ, 144 ವರ್ಷಗಳ ನಂತರ ಆ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದೇ?” ಎಂದು ಅವರು ತಿವಿದಿದ್ದಾರೆ.

ಖಗೋಳ ವಿದ್ಯಮಾನಗಳ ಕಾರಣಕ್ಕೆ ಈ ಅಪರೂಪದ ಮಹಾ ಕುಂಭ ಮೇಳವು 144 ವರ್ಷಗಳ ನಂತರ ನಡೆಯಲಿದೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ, ಭಕ್ತಾದಿಗಳನ್ನು ಮಹಾ ಕುಂಭ ಮೇಳ ಸ್ಥಳಕ್ಕೆ ಕರೆದೊಯ್ಯುವ ವ್ಯವಹಾರದಿಂದ ಸುಮಾರು ನಾಲ್ಕು ಲಕ್ಷ ನಾಗರಿಕ ಸೇವಾ ಉದ್ಯೋಗಾಕಾಂಕ್ಷಿಗಳು ಒಂದು ಹೊಸ ಮೋಟಾರ್ ಸೈಕಲ್ ಖರೀದಿಸಲು ಸಾಕಾಗುವಷ್ಟು ಹಣವನ್ನು ಸಂಪಾದಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News