ವಿಧಾನಸಭಾ ಉಪಚುನಾವಣೆ | ನಿಲಂಬೂರಿನಲ್ಲಿ ಯುಡಿಎಫ್, ಕಾಲಿಗಂಜ್‌ನಲ್ಲಿ ಟಿಎಂಸಿಗೆ ಮುನ್ನಡೆ
ಹೊಸದಿಲ್ಲಿ : ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಕೇರಳ ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ.
ಕೇರಳದ ನಿಲಂಬೂರಿನಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯುಡಿಎಫ್) ಮುನ್ನಡೆಯನ್ನು ಕಾಯ್ದುಕೊಂಡಿದೆ.
ಪಂಜಾಬ್‌ನ ಲುಧಿಯಾನ ಪಶ್ಚಿಮ ಮತ್ತು ಗುಜರಾತ್‌ನ ವಿಸಾವದರ್ ಕ್ಷೇತ್ರದಲ್ಲಿ ಆಪ್ ಆರಂಭಿಕ ಮುನ್ನಡೆಯನ್ನು ಸಾಧಿಸಿದೆ. ಪಶ್ಚಿಮ ಬಂಗಾಳದ ಕಾಲಿಗಂಜ್‌ನಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಗುಜರಾತ್‌ನ ಕಾಡಿಯಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.
ಕೇರಳದ ನಿಲಂಬೂರ್ ಕ್ಷೇತ್ರದಲ್ಲಿ ಆರ್ಯಾದನ್ ಶೌಕತ್ ಯುಡಿಎಫ್‌ನಿಂದ ಕಣದಲ್ಲಿದ್ದಾರೆ. ಈ ಕ್ಷೇತ್ರ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತಿನಿಧಿಸುವ ವಯನಾಡ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಎಲ್‌ಡಿಎಫ್‌ನಿಂದ ಎಂ. ಸ್ವರಾಜ್, ಬಿಜೆಪಿಯಿಂದ ವಕೀಲ ಮೋಹನ್ ಜಾರ್ಜ್ ಕಣದಲ್ಲಿದ್ದಾರೆ.
ಲುಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಆಪ್ ಪಕ್ಷದ ಮಾಜಿ ರಾಜ್ಯಸಭಾ ಸಂಸದ ಮತ್ತು ಕೈಗಾರಿಕೋದ್ಯಮಿ ಸಂಜೀವ್ ಅರೋರಾ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಭರತ್ ಭೂಷಣ್ ಎರಡನೇ ಸ್ಥಾನದಲ್ಲಿದ್ದಾರೆ.