ಜಮ್ಮುಕಾಶ್ಮೀರ | ಉಮರ್ ಅಬ್ದುಲ್ಲಾ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಆಪ್ ಪಕ್ಷದ ಏಕೈಕ ಶಾಸಕ
Photo | PTI
ಶ್ರೀನಗರ: ಜಮ್ಮುಕಾಶ್ಮೀರದ ಆಪ್ ಪಕ್ಷದ ಏಕೈಕ ಶಾಸಕ ಮೆಹ್ರಾಜ್ ಮಲಿಕ್ ಅವರು ಉಮರ್ ಅಬ್ದುಲ್ಲಾ ನೇತೃತ್ವದ ಜಮ್ಮುಕಾಶ್ಮೀರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಶಾಸಕ ಮೆಹ್ರಾಜ್ ಮಲಿಕ್, ದೋಡಾದ ಶಾಸಕನಾಗಿರುವ ನಾನು, ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ಜಮ್ಮುಕಾಶ್ಮೀರದ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ಜನರ ನಂಬಿಕೆ ಮತ್ತು ಕಲ್ಯಾಣ ಯಾವಾಗಲೂ ನನ್ನ ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ಹೇಳಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬಹುಮತ ಹೊಂದಿದೆ. ಮಲಿಕ್ ಬೆಂಬಲ ಹಿಂಪಡೆದುಕೊಂಡಿರುವುದರಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 90 ಸ್ಥಾನಗಳ ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42 ಶಾಸಕರನ್ನು ಹೊಂದಿದೆ. ಆರು ಮಂದಿ ಕಾಂಗ್ರೆಸ್ ಶಾಸಕರು ಮತ್ತು ಐವರು ಸ್ವತಂತ್ರ ಶಾಸಕರ ಬೆಂಬಲ ಉಮರ್ ಅಬ್ದುಲ್ಲಾ ನೇತೃತ್ವದ ಸರಕಾರಕ್ಕಿದೆ.