×
Ad

ಉತ್ತರ ಪ್ರದೇಶ | ಮರುನಾಮಕರಣ ವಿವಾದ; ವೀರ ಸೇನಾನಿ ಹುತಾತ್ಮ ಅಬ್ದುಲ್ ಹಮೀದ್ ರ ಹೆಸರು ಮರು ಸ್ಥಾಪನೆ

Update: 2025-02-18 19:16 IST

ಅಬ್ದುಲ್ ಹಮೀದ್ |  PC : Veer Abdul Hamid\ facebook

ಘಾಝಿಪುರ್: 1965ರ ಯುದ್ಧದ ವೀರ ಸೇನಾನಿ ಅಬ್ದುಲ್ ಹಮೀದ್ ರ ಕುಟುಂಬದ ಸದಸ್ಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರ ತವರು ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದಲ್ಲಿ ಅವರ ಹೆಸರನ್ನು ಶಿಕ್ಷಣ ಇಲಾಖೆ ಮರು ಸ್ಥಾಪಿಸಿದೆ. ಇತ್ತೀಚೆಗೆ ಶಾಲೆಯ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿಯುವ ಸಂದರ್ಭದಲ್ಲಿ ಅವರು ಹೆಸರನ್ನು ಅಳಿಸಿ ಹಾಕಲಾಗಿತ್ತು.

ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರವಿರುವ ಜಖಾನಿಯನ್ ತಾಲ್ಲೂಕಿನ ಧಮುಪುರ್ ಗ್ರಾಮದಲ್ಲಿರುವ ಈ ಶಾಲೆಗೆ ತಮ್ಮ ಬಾಲ್ಯದಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮ ಅಬ್ದುಲ್‌ ಹಮೀದ್ ರ ಹೆಸರನ್ನಿಡಲಾಗಿತ್ತು.

ಆದರೆ, ಐದು ದಿನಗಳ ಹಿಂದೆ ಶಾಲಾ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ, ಪ್ರಾಥಮಿಕ ಶಿಕ್ಷಣ ಇಲಾಖೆಯು ಶಾಲೆಯ ಮುಖ್ಯ ದ್ವಾರದಲ್ಲಿದ್ದ ಅವರ ಹೆಸರಿನ ಬದಲಿಗೆ “ಪ್ರಧಾನ ಮಂತ್ರಿ ಶ್ರೀ ಸಂಯುಕ್ತ ಶಾಲೆ” ಎಂದು ಮರು ನಾಮಕರಣ ಮಾಡಿತ್ತು. ಪ್ರಾಥಮಿಕ ಶಿಕ್ಷಣ ಇಲಾಖೆ ಈ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಆರಂಭದಲ್ಲಿ, ಹುತಾತ್ಮ ಅಬ್ದುಲ್ ಹಮೀದ್ ಅವರ ಹೆಸರನ್ನು ಪ್ರವೇಶ ದ್ವಾರದ ಬಳಿ ಮರು ಸ್ಥಾಪಿಸುವ ಬದಲು, ಗೋಡೆಯೊಂದರ ಮೇಲೆ ಬರೆಯುವ ಮೂಲಕ ಅವರ ಕುಟುಂಬದ ಸದಸ್ಯರನ್ನು ಸಮಾಧಾನಗೊಳಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ, ಅಬ್ದುಲ್ ಹಮೀದ್ ಅವರ ಮೊಮ್ಮಗ ಜಮೀಲ್ ಅಹ್ಮದ್ ಈ ವಿಷಯವನ್ನು ಉನ್ನತ ಪ್ರಾಧಿಕಾರಗಳ ಬಳಿಗೆ ಕೊಂಡೊಯ್ದಿದ್ದರು.

“ಇಂದು (ಫೆಬ್ರವರಿ 18) ಶಾಲೆಯ ಹೆಸರನ್ನು ಮುಖ್ಯ ದ್ವಾರದಲ್ಲಿ ‘ಶಹೀದ್ ವೀರ್ ಅಬ್ದುಲ್ ಹಮೀದ್ ಪ್ರಧಾನ ಮಂತ್ರಿ ಶ್ರೀ ಸಂಯುಕ್ತ ಶಾಲೆ, ಧಮುಪುರ್, ಜಖಾನಿಯನ್, ಘಾಝಿಪುರ್ ಜಿಲ್ಲೆ” ಎಂದು ಮರು ಸ್ಥಾಪಿಸಲಾಗಿದೆ” ಎಂದು ಜಮೀಲ್ ಅಹ್ಮದ್ ದೃಢಪಡಿಸಿದ್ದಾರೆ.

ಅಗ್ರ ಸ್ಥಳದಲ್ಲಿದ್ದ ಅಬ್ದುಲ್ ಹಮೀದ್ ಅವರ ಹೆಸರನ್ನು ತೆಗೆದು ಹಾಕಿದ್ದಕ್ಕೆ ಪ್ರಾಥಮಿಕ ಶಿಕ್ಷಣಾಧಿಕಾರಿ ಹೇಮಂತ್ ರಾವ್ ಅವರನ್ನು ಹಮೀದ್ ಕುಟುಂಬದ ಸದಸ್ಯರು ಟೀಕಿಸಿದ್ದಾರೆ. “ದೇಶಕ್ಕಾಗಿ ಯುದ್ಧದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಯ ಹೆಸರನ್ನು ಅಳಿಸಿ ಹಾಕುವುದು ಕ್ಷಮಿಸಲಾರದ ತಪ್ಪಾಗಿದೆ” ಎಂದು ಅಹ್ಮದ್ ಟೀಕಿಸಿದ್ದಾರೆ.

ಈ ವಿಷಯದ ಕುರಿತು ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ಇದು ತೀವ್ರ ಖಂಡನೀಯವಾಗಿದ್ದು, ಇತರರಿಗಿಂತ ದೇಶಕ್ಕಾಗಿ ಬಲಿದಾನ ಮಾಡಿದವರು ಕಡಿಮೆ ಪ್ರಾಮುಖ್ಯತೆ ಪಡೆಯುತ್ತಿರುವುದು ಅಸಭ್ಯವಾಗಿದೆ. ಕೆಲವು ವ್ಯಕ್ತಿಗಳು ದೇಶದ ಹೆಸರನ್ನು ಭಾರತದಿಂದ ಬಿಜೆಪಿ ಎಂದು ಬದಲಿಸುವುದು ಮಾತ್ರ ಬಾಕಿ ಉಳಿದಿದೆ” ಎಂದು ಕಿಡಿ ಕಾರಿದ್ದಾರೆ.

“ದೇಶದ ಸ್ವಾತಂತ್ರ್ಯ ಗಳಿಕೆಯಲ್ಲಾಗಲಿ ಅಥವಾ ದೇಶದ ಸ್ವಾತಂತ್ರ್ಯ ರಕ್ಷಣೆಯಲ್ಲಾಗಲಿ ಯಾವುದೇ ಪಾತ್ರ ವಹಿಸದ ವ್ಯಕ್ತಿಗಳಿಗೆ ಹುತಾತ್ಮರ ಮಹತ್ವ ಅರ್ಥವಾಗಲಾದರೂ ಹೇಗೆ ಸಾಧ್ಯ?” ಎಂದೂ ಅವರು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News