ಲಂಡನ್ | ವಿಮಾನದಲ್ಲಿ ಆಗಸಮಧ್ಯೆ ಬಾಂಬ್ ಬೆದರಿಕೆ ಹಾಕಿದ ಅಭಯ್ ನಾಯಕ್ ಯಾರು?
ಅಭಯ್ ನಾಯಕ್ | PC : timesofindia.indiatimes.com
ಲಂಡನ್: ರವಿವಾರ ಲಂಡನ್ ಲ್ಯುಟನ್ ನಿಂದ ಗ್ಲಾಸ್ಗೊಗೆ ತೆರಳುತ್ತಿದ್ದ ಈಸಿ ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 41 ವರ್ಷದ ಅಭಯ್ ನಾಯಕ್ ಎಂಬ ಪ್ರಯಾಣಿಕನು, ಬಾಂಬ್ ಬೆದರಿಕೆ ಹಾಕಿ ಸಹ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿರುವ ಘಟನೆ ತಡವಾಗಿ ವರದಿಯಾಗಿದೆ.
ಆಗಸದಲ್ಲಿ ಮಾರ್ಗ ಮಧ್ಯದಲ್ಲಿ ಬಾಂಬ್ ಬೆದರಿಕೆ ಹಾಕಿದ ಅಭಯ್ ನಾಯಕ್, ರಾಜಕೀಯ ಘೋಷಣೆಗಳನ್ನು ಕೂಗುವ ಮೂಲಕ, ಸಹ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದ ಪರಿಣಾಮ, ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಹೇಳಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನದ ಶೌಚಾಲಯದಿಂದ ಹೊರ ಬಂದ ಅಭಯ್ ನಾಯಕ್, ಮೊದಲಿಗೆ ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗಿ, ನಂತರ ತನ್ನ ಬಳಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ಎನ್ನಲಾಗಿದೆ.
ಈ ವೇಳೆ ಸ್ಕಾಟ್ಲೆಂಡ್ ನಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಾನೊಂದು ಸಂದೇಶ ರವಾನಿಸಬೇಕಿದೆ ಎಂದು ಶಂಕಿತ ದುಷ್ಕರ್ಮಿ ಹೇಳಿದ ಹಾಗೂ ‘ಅಮೆರಿಕಕ್ಕೆ ಸಾವು’ ಹಾಗೂ ‘ಟ್ರಂಪ್ ಗೆ ಸಾವು’ ಎಂಬ ಘೋಷಣೆಗಳನ್ನು ಕೂಗಿದ ಎಂದು ವರದಿಯಾಗಿದೆ. ಇದರ ಬೆನ್ನಿಗೇ, ಮಾರ್ಗಮಧ್ಯದಲ್ಲೇ ಸಹ ಪ್ರಯಾಣಿಕರು ಆತನನ್ನು ಅಂತಹ ಘೋಷಣೆ ಕೂಗುವುದರಿಂದ ತಡೆದಿದ್ದಾರೆ.
ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೊದಲ್ಲಿ, ಶಂಕಿತ ದುಷ್ಕರ್ಮಿಯನ್ನು ಸಹ ಪ್ರಯಾಣಿಕನೊಬ್ಬ ಕೆಳಕ್ಕುರುಳಿಸಿರುವುದು ಹಾಗೂ ವಿಮಾನದ ಪರಿಚಾರಕರು ಆತನಿಗೆ ಸಂಬಂಧಿಸಿದ ವಸ್ತುಗಳ ಪರಿಶೀಲನೆ ನಡೆಸುತ್ತಿರುವುದು ಕಂಡು ಬಂದಿದೆ.
ಅಭಯ್ ನಾಯಕ್ ಯಾರು?
ಲಂಡನ್ ನ ಲ್ಯುಟಿನ್ ನಿವಾಸಿಯಾದ 41 ವರ್ಷದ ಅಭಯ್ ನಾಯಕ್ ನನ್ನು ವಾಯು ಮಾರ್ಗ ಮಧ್ಯೆ ಈಸಿ ಜೆಟ್ ವಿಮಾನದಲ್ಲಿ ಭೀತಿ ಸೃಷ್ಟಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಅಭಯ್ ನಾಯಕ್ ಭಾರತೀಯ ಪ್ರಜೆಯಾಗಿದ್ದು, ನಿರಾಶ್ರಿ ತ ಸ್ಥಾನಮಾನದೊಂದಿಗೆ ಲಂಡನ್ ನಲ್ಲಿ ನೆಲೆಸಿರುವುದು ಆತನ ದಾಖಲೆಗಳಿಂದ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ವಿಮಾನದಲ್ಲಿ ಬಾಂಬ್ ಬೆದರಿಕೆ ಹಾಕಿದ್ದರಿಂದ, ತಕ್ಷಣವೇ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಪೈಲಟ್, ತ್ವರಿತವಾಗಿ ವಿಮಾನವನ್ನು ಕೆಳಕ್ಕಿಳಿಸಿದ್ದಾರೆ. ವಿಮಾನವು ಬೆಳಗ್ಗೆ ಸುಮಾರು 8.20ರ ವೇಳೆಗೆ ಸುರಕ್ಷಿತವಾಗಿ ಗ್ಲಾಸ್ಗೊ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ್ದು, ಅದನ್ನು ದೂರದ ಪ್ರದೇಶಕ್ಕೆ ಕರೆದೊಯ್ದು ನಿಲುಗಡೆ ಮಾಡಲಾಯಿತು.
ಬಳಿಕ ವಿಮಾನವೇರಿದ ಪೊಲೀಸರು, ಅಭಯ್ ನಾಯಕ್ ನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಪೈಸ್ಲೆ ಶೆರಿಫ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಆತ ತನ್ನ ಪರವಾಗಿ ನ್ಯಾಯಾಲಯದಲ್ಲಿ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು BBC ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಭಯ್ ನಾಯಕ್ ವಿರುದ್ಧ ಬ್ರಿಟನ್ ವಿಮಾನ ಯಾನ ಕಾನೂನುಗಳಡಿ ಹಲ್ಲೆ ಮತ್ತು ವಿಮಾನದ ಸುರಕ್ಷತೆಗೆ ಧಕ್ಕೆ ತಂದ ಆರೋಪಗಳನ್ನು ಹೊರಿಸಲಾಗಿದೆ. ಆದರೆ, ಇದುವರೆಗೆ ಆತನ ಹಿನ್ನೆಲೆ ಅಥವಾ ಉದ್ದೇಶದ ಬಗ್ಗೆ ಮತ್ತಾವುದೇ ವಿವರಗಳನ್ನು ಅಧಿಕಾರಿಗಳು ಬಹಿರಂಗಗೊಳಿಸಿಲ್ಲ.
ಈ ಪ್ರಕರಣದ ಆರಂಭಿಕ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ಪೊಲೀಸರು, ಅಭಯ್ ನಾಯಕ್ ವಿರುದ್ಧ ಯಾವುದೇ ಭಯೋತ್ಪಾದನೆಯ ಆರೋಪಗಳಿಲ್ಲದಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ವಿಮಾನದಲ್ಲಿ ಯಾವುದೇ ಬಾಂಬ್ ಕೂಡಾ ಕಂಡು ಬಂದಿಲ್ಲ.
ಅಭಯ್ ನಾಯಕ್ ಇನ್ನೂ ಪೊಲೀಸರ ವಶದಲ್ಲಿಯೇ ಇದ್ದು, ಆತನನ್ನು ಮುಂದಿನ ವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ವರದಿಯಾಗಿದೆ.
ಸೌಜನ್ಯ: timesofindia