×
Ad

ಭಾರತದ ಶೂನ್ಯ ದಾಖಲಾತಿ ಇರುವ 8,000 ಶಾಲೆಗಳಲ್ಲಿ 20,000 ಶಿಕ್ಷಕರು : ಸಚಿವಾಲಯದ ಅಂಕಿ-ಅಂಶಗಳಿಂದ ಬಹಿರಂಗ

ಉತ್ತರ ಪ್ರದೇಶದಲ್ಲಿ ಅತ್ಯಧಿಕ ಏಕೋಪಾಧ್ಯಾಯ ಶಾಲೆಗಳು

Update: 2025-10-26 14:19 IST

ಸಾಂದರ್ಭಿಕ ಚಿತ್ರ (AI)

ಹೊಸದಿಲ್ಲಿ: 2024-25ನೇ ಶೈಕ್ಷಣಿಕ ಸಾಲಿನಲ್ಲಿ ದೇಶಾದ್ಯಂತ ಸುಮಾರು ಎಂಟು ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ ಎಂದು ಅಧಿಕೃತ ದತ್ತಾಂಶದಿಂದ ಬಯಲಾಗಿದೆ. ಈ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದು, ತೆಲಂಗಾಣ ಎರಡನೇ ಸ್ಥಾನದಲ್ಲಿದೆ.

ಶೂನ್ಯ ದಾಖಲಾತಿ ಇರುವ ಶಾಲೆಗಳಲ್ಲಿ ಒಟ್ಟು 20,817 ಶಿಕ್ಷಕರಿದ್ದಾರೆ. ಈ ಪೈಕಿ ಪಶ್ಚಿಮ ಬಂಗಾಳದ ಪಾಲು ಅಧಿಕವಾಗಿದ್ದು, ಇಂತಹ 17,965 ಶಿಕ್ಷಕರಿದ್ದಾರೆ. ಅಲ್ಲಿ ಶೂನ್ಯ ದಾಖಲಾತಿ ಇರುವ ಒಟ್ಟು 3,812 ಶಾಲೆಗಳಿವೆ.

ಶಿಕ್ಷಣ ಇಲಾಖೆಯ ದತ್ತಾಂಶದ ಪ್ರಕಾರ, ದೇಶದಲ್ಲಿನ 7,993 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದ್ದು, ಕಳೆದ ವರ್ಷ ಈ ಪ್ರಮಾಣ 12,954 ಇತ್ತು.

ಆದರೆ, ಹರ್ಯಾಣ, ಮಹಾರಾಷ್ಟ್ರ, ಅಸ್ಸಾಂ, ಹಿಮಾಚಲ ಪ್ರದೇಶ, ಛತ್ತೀಸಗಢ, ನಾಗಾಲ್ಯಾಂಡ್, ಸಿಕ್ಕಿ ಹಾಗೂ ತ್ರಿಪುರಾದಲ್ಲಿ ಯಾವುದೇ ಶೂನ್ಯ ದಾಖಲಾತಿಯ ಶಾಲೆಗಳಿಲ್ಲ. ಪುದುಚೇರಿ, ಲಕ್ಷದ್ವೀಪ, ದಾದ್ರಾ ಮತ್ತು ನಗರ್ ಹವೇಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ದಮನ್ ಮತ್ತು ದಿಯು ಹಾಗೂ ಚಂಡೀಗಢ ಮುಂತಾದ ಕೇಂದ್ರಾಡಳಿತ ಪ್ರದೇಶ ಹಾಗೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳಿಲ್ಲ.

ತೆಲಂಗಾಣದಲ್ಲಿ 2,245 ಹಾಗೂ ಮಧ್ಯಪ್ರದೇಶದಲ್ಲಿ 463 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಇಲ್ಲಿ ಕ್ರಮವಾಗಿ 1,016 ಹಾಗೂ 223 ಶಿಕ್ಷಕರಿದ್ದಾರೆ.

ಉತ್ತರ ಪ್ರದೇಶದಲ್ಲೂ ಇಂತಹ 81 ಶಾಲೆಗಳಿದ್ದು, ಏಕೋಪಾಧ್ಯಾಯ ಶಾಲೆಗಳೂ ಕೂಡಾ ಉತ್ತರ ಪ್ರದೇಶದಲ್ಲೇ ಅಧಿಕ ಸಂಖ್ಯೆಯಲ್ಲಿವೆ. ಏಕೋಪಾದ್ಯಾಯ ಶಾಲೆಗಳ ಪೈಕಿ ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ನಂತರದ ಸ್ಥಾನದಲ್ಲಿವೆ.

ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಯೊಬ್ಬರು, “ಶಾಲಾ ಶಿಕ್ಷಣ ರಾಜ್ಯ ಪಟ್ಟಿಯಲ್ಲಿ ಬರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಸಂಪನ್ಮೂಲ ಹಾಗೂ ಶಿಕ್ಷಕರನ್ನು ಬಳಸಿಕೊಳ್ಳಲು ಶಾಲೆಗಳನ್ನು ವಿಲೀನಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News