×
Ad

ಬಾಬ್ರಿ ಮಸೀದಿ ಧ್ವಂಸದ ನಂತರ ಪೇಡಾ ತಿಂದು, ಜೈ ಶ‍್ರೀರಾಮ್ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದ ಐಎಎಸ್ ಅಧಿಕಾರಿಗಳು!

Update: 2024-01-23 22:55 IST

ಅವತ್ತು ನಾವೆಲ್ಲ ಸೇರಿ ಜೈ ಶ್ರೀ ರಾಮ್ ಘೋಷಣೆ ಕೂಗಿ ಸಂಭ್ರಮಿಸಿದೆವು.

ನಾನು ಅವತ್ತು ಒಂದಿಡೀ ಕೇಸರಿ ಪೇಡಾವನ್ನು ತಿಂದು ಖುಷಿ ಪಟ್ಟೆ.

ಹೀಗೆ 1992 ಡಿಸೆಂಬರ್ 6 ರ ರಾತ್ರಿಯ ತಮ್ಮ ನೆನಪನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದು ಯಾವುದೊ ಸಂಘ ಪರಿವಾರದ ನಾಯಕರೋ, ಹಿಂದುತ್ವ ಕಾರ್ಯಕರ್ತರೋ ಅಲ್ಲ.

ಬಿಜೆಪಿಯ ನಾಯಕರೂ ಅಲ್ಲ.

ಬಾಬರಿ ಮಸೀದಿ ಧ್ವಂಸಗೊಂಡ ದಿನ ನಾವು ರಹಸ್ಯವಾಗಿ ಮೀಟಿಂಗ್ ಮಾಡಿ ಸಂಭ್ರಮಿಸಿದೆವು ಎಂದು ಯಾವುದೇ ಮುಲಾಜಿಲ್ಲದೆ ಹೇಳಿಕೊಂಡಿದ್ದು ಒಬ್ಬ ಹಿರಿಯ ಐಎಎಸ್ ಅಧಿಕಾರಿ.

ಆಕೆಯ ಹೆಸರು ಮನೀಷಾ ಪಾಟಂಕರ್ ಮಹಿಸ್ಕರ್ .

ಆಕೆ ಮಹಾರಾಷ್ಟ್ರದ ಹಿರಿಯ ಐಎಎಸ್ ಅಧಿಕಾರಿ.

ಈಗ ಅಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಆಕೆ.

ಅಯೋಧ್ಯೆಯಲ್ಲಿ ನೂತನ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲೇ ಐಎಎಸ್ ಅಧಿಕಾರಿ ಮನೀಷಾ ಪಾಟಂಕರ್ ಗೆ 1992 ರ ತಮ್ಮ ಅನುಭವ ನೆನಪಾಗಿದೆ.

ಅದನ್ನು ಅವರು ಸುದೀರ್ಘ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಬರೆದುಕೊಂಡಿದ್ದಾರೆ.

ಜೈ ಶ್ರೀ ರಾಮ್ ಎಂದು ಶುರುವಾಗುವ ಆ ಫೇಸ್ ಬುಕ್ ಪೋಸ್ಟ್ ನಲ್ಲಿ ಮನೀಷಾ 1992 ಡಿಸೆಂಬರ್ 6 ರಂದು ಮಸ್ಸೂರಿಯ ಐಎಎಸ್ ತರಬೇತಿ ಸಂಸ್ಥೆಯಲ್ಲಿದ್ದ ದಿನವನ್ನು ನೆನಪಿಸಿಕೊಂಡಿದ್ದಾರೆ. " ಜೀವನ ಒಂದು ಸುತ್ತು ಪೂರ್ಣವಾಗಿದೆ. 1992 ಡಿಸೆಂಬರ್ 6 ರಂದು ಮಸ್ಸೂರಿಯಲ್ಲಿ ಬಹಳ ಚಳಿಯಿತ್ತು. 1992 ರ ಬ್ಯಾಚ್ ನ ಐಎಎಸ್ ಅಧಿಕಾರಿಗಳು ಅಲ್ಲಿ ಫೌಂಡೇಶನ್ ಕೋರ್ಸ್ ನಲ್ಲಿದ್ದೆವು. ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ನಡೆಯುತ್ತಿರುವ ಭಾರೀ ಬೆಳವಣಿಗೆಗಳ ಬಗ್ಗೆ ನಮಗೆ ಮಾಹಿತಿ ಬರುತ್ತಿತ್ತು. ಆಗ ನಮ್ಮ ಸಂಸ್ಥೆಯಲ್ಲಿ ಒಂದು ದಿಢೀರ್ ರಹಸ್ಯ ಸಭೆ ಕರೆಯಲಾಯಿತು. ಅದಕ್ಕೆ ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶವಿತ್ತು. ನನ್ನ ನಾಗ್ಪುರ ( ಆರೆಸ್ಸೆಸ್ ಕೇಂದ್ರ ಕಚೇರಿ ಇರುವ ನಗರ) ನಂಟು ನನಗೆ ಸಭೆಯಲ್ಲಿ ಭಾಗವಹಿಸಲು ಆಹ್ವಾನ ಸಿಗಲು ಸಾಕಾಗಿತ್ತು. ಆ ಸಭೆಯಲ್ಲಿ ಕೆಲವರು ಜೈ ಶ್ರೀ ರಾಮ್ ಘೋಷಣೆ ಕೂಗುತ್ತಿದ್ದರು. ಅಂದು ರಾತ್ರಿ ಆ ಚಳಿಯಲ್ಲಿ ಒಂದಿಡೀ ಕೇಸರಿ ಪೇಡಾವನ್ನು ತಿಂದಿದ್ದು ನನಗೆ ಚೆನ್ನಾಗಿ ನೆನಪಿದೆ. ಅಯೋಧ್ಯೆಯಲ್ಲಿ ಅಂದು ನಡೆದ ಘಟನೆ ( ಬಾಬರಿ ಮಸೀದಿ ಧ್ವಂಸ) ಬಹಳ ಧನಾತ್ಮಕ, ಬಹಳ ಶಕ್ತಿಶಾಲಿ ಹಾಗು ಬಹಳ ಪುಣ್ಯದಾಯಕ ಕೆಲಸದ ಆರಂಭ ಎಂದು ನನಗೆ ಗೊತ್ತಿತ್ತು " ಎಂದು ಹೇಳುತ್ತಾರೆ ಮನೀಷಾ ಪಾಟಂಕರ್.

ಈ ರಹಸ್ಯ ಸಂಭ್ರಮ ಸಭೆಯ ಬಗ್ಗೆ ತರಬೇತಿ ಸಂಸ್ಥೆಗೆ ಗೊತ್ತಾಗಿ ಅದರಲ್ಲಿ ಭಾಗವಹಿಸಿದವರಿಗೆ ನೊಟೀಸ್ ಕೂಡ ನೀಡಲಾಗಿತ್ತು ಎಂದು ಮನೀಷಾ ಹೇಳಿದ್ದಾರೆ.

ಮತ್ತೆ ಮುಂದುವರಿದು " 1992 ರ ಬ್ಯಾಚ್ ಅನ್ನು ತೀರಾ ನಿರಾಶಾದಾಯಕ ಹಾಗು ಬಹಳ ಸುಲಭವಾಗಿ ರೋಮಾಂಚನಗೊಳ್ಳುವ ಸಣ್ಣ ನಗರಗಳಿಂದ ಬಂದವರು ಎಂದೇ ಪರಿಗಣಿಸಲಾಗಿತ್ತು. ಶ್ರೀಮಂತ, ಲುಟಿಯೆನ್ಸ್ (ದಿಲ್ಲಿಯ ಪ್ರಭಾವಿ ಜನರು ವಾಸಿಸುವ ಪ್ರದೇಶ) ಪ್ರದೇಶದ ಮಕ್ಕಳಿಗೆ ಆ ವರ್ಷ ಏನಾಗಿತ್ತೋ ? ಜಾತ್ಯತೀತತೆಗೆ ಆಗ ಏನಾಯಿತು ? ಎಂದು ಆಗ ಕೇಳಲಾಗಿತ್ತು " ಎಂದು ಬರೆಯುತ್ತಾರೆ ಮನೀಷಾ ಪಾಟಂಕರ್.

" ಆಮೇಲೆಯೂ ಬದುಕು ಏರಿಳಿತಗಳ ಜೊತೆ ಮುಂದುವರೆದಿತ್ತು. ಆದರೆ ಡಿಸೆಂಬರ್ 6, 1992 ರ ಘಟನೆ ಬಹಳ ಧನಾತ್ಮಕ, ಬಹಳ ಶಕ್ತಿಶಾಲಿ ಹಾಗು ಬಹಳ ಪುಣ್ಯದಾಯಕ ಕೆಲಸದ ಆರಂಭ ಎಂಬ ನಂಬಿಕೆ ಮಾತ್ರ ನನ್ನಲ್ಲಿ ಗಟ್ಟಿಯಾಗಿತ್ತು " ಎಂದು ಬರೆದುಕೊಂಡಿರುವ ಮನೀಷಾ ಕೊನೆಗೆ " ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಆಗುವ ಹಿಂದಿನ ಸಂಜೆ ಮತ್ತೊಮ್ಮೆ ಒಂದಿಡೀ ಕೇಸರಿ ಪೇಡಾವನ್ನು ತಿಂದು ಸಂಭ್ರಮಿಸಿ ಡಿಸೆಂಬರ್ 6, 1992 ರ ಅಯೋಧ್ಯೆಯ ಮಹತ್ವದ ಘಟನೆ ಹಾಗು ಅದು ನಮ್ಮಲ್ಲಿ ತರುವ ಧನಾತ್ಮಕ, ಪುಣ್ಯದಾಯಕ ಭಾವನೆಯನ್ನು ನೆನೆದೆ " ಎಂದು ಹೇಳುತ್ತಾ ಫೇಸ್ ಬುಕ್ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.

ತಮ್ಮ ಪೋಸ್ಟ್ ಜೊತೆ ತಾನು ತನ್ನ ಪತಿ 1991 ರ ಬ್ಯಾಚ್ ನ ಐಎಎಸ್ ಅಧಿಕಾರಿ ಮಿಲಿಂದ್ ಮಹಿಸ್ಕರ್ ಅವರಿಗೆ ಸಿಹಿ ತಿನ್ನಿಸುತ್ತಿರುವ ಫೋಟೋವನ್ನೂ ಮನಿಷಾ ಹಾಕಿದ್ದಾರೆ.

ಸರಕಾರಿ ಸೇವೆಯಲ್ಲಿರುವ ಅಧಿಕಾರಿಯೊಬ್ಬರು ಅದೂ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಈ ರೀತಿ ಒಂದು ವಿಧ್ವಂಸಕ ಕೃತ್ಯವನ್ನು ಧನಾತ್ಮಕ, ಪುಣ್ಯದಾಯಕ, ಶಕ್ತಿಯುತ ಎಂದೆಲ್ಲ ಬಣ್ಣಿಸಿರುವುದು ಆಘಾತಕಾರಿ ಎಂದು ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಸರಕಾರಿ ಅಧಿಕಾರಿಗಳು ತಮ್ಮ ಧಾರ್ಮಿಕ ನಂಬಿಕೆಯನ್ನು ವೈಯಕ್ತಿಕವಾಗಿ ಆಚರಿಸಬೇಕೇ ವಿನಃ ಎಲ್ಲೂ ಸಾರ್ವಜನಿಕವಾಗಿ ಒಂದು ಧರ್ಮದ ಪರ ಇರುವಂತೆ ಕಾಣಿಸಿಕೊಳ್ಳಬಾರದು ಎಂದು ನಿಯಮವೇ ಇದೆ. ಆದರೆ ಮನೀಷಾ ಪಾಟಂಕರ್ ಧಾರ್ಮಿಕ ಒಲವು ನಿಲುವು ಪ್ರದರ್ಶಿಸಿದ್ದು ಮಾತ್ರವಲ್ಲ, ದೇಶದ ಸುಪ್ರೀಂ ಕೋರ್ಟ್ ದೊಡ್ಡ ಅಪರಾಧ ಎಂದು ಹೇಳಿರುವ ಘಟನೆಯನ್ನೇ ವೈಭವೀಕರಿಸಿ, ಅದು ನನ್ನಲ್ಲಿ ಧನಾತ್ಮಕ, ಪುಣ್ಯ ಭಾವನೆ ಉದ್ದೀಪಿಸುತ್ತದೆ ಎಂದು ಹೇಳಿದ್ದಾರೆ. ಬಾಬರಿ ಮಸೀದಿ ಧ್ವಂಸವಾದ ದಿನ ನಾನು ಸಿಹಿ ತಿಂದು ಸಂಭ್ರಮಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಹಾಗಾದರೆ ಇಂತಹ ಮನೋಭಾವದ ಅಧಿಕಾರಿ ತನ್ನ ವೃತ್ತಿ ಜೀವನದುದ್ದಕ್ಕೂ ಹೇಗೆ ಕಾರ್ಯ ನಿರ್ವಹಿಸಿರಬಹುದು ? ಹೇಗೆ ಬೇರೆ ಬೇರೆ ಧರ್ಮಗಳ ಜನರನ್ನು ನಡೆಸಿಕೊಂಡಿರಬಹುದು ? ಹೇಗೆ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು ? ಎಂಬ ಬಗ್ಗೆ ಖಂಡಿತ ಪ್ರಶ್ನೆಗಳು ಏಳುತ್ತವೆ ಎಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.

ಬಾಬರಿ ಮಸೀದಿ ಧ್ವಂಸವಾದ ದಿನ ಮನೀಷಾ ಜೊತೆ ಸಂಭ್ರಮಿಸಿದ ಇತರ ಐಎಎಸ್ ಅಧಿಕಾರಿಗಳು ಯಾರು ? ಅವರು ಆಮೇಲೆ ಎಲ್ಲೆಲ್ಲ ಕಾರ್ಯನಿರ್ವಹಿಸಿದ್ದಾರೆ ? ಅಲ್ಲಿ ಅವರ ಕಾರ್ಯವೈಖರಿ ಹೇಗಿತ್ತು ? ಎಂದೂ ಜನರು ಪ್ರಶ್ನಿಸಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿಗಳೇ ಹೀಗೆ ಬಹಿರಂಗವಾಗಿ ವಿಧ್ವಂಸಕ ಕೃತ್ಯವೊಂದನ್ನು ವೈಭವೀಕರಿಸಿ ಸಂಭ್ರಮಿಸಿದ ಬಗ್ಗೆ ಹೇಳುತ್ತಿದ್ದಾರೆ ಅಂದರೆ ದೇಶದಲ್ಲಿ ಜಾತ್ಯತೀತ ವ್ಯವಸ್ಥೆ ಎಲ್ಲಿಗೆ ತಲುಪಿದೆ ಎಂದೂ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಚರ್ಚಿಸಿರುವ ಎನ್‍ಡಿಟಿವಿಯ ಮಾಜಿ ಮುಂಬೈ ಕಚೇರಿ ಮುಖ್ಯಸ್ಥ ಸೋಹಿತ್ ಮಿಶ್ರಾ, ಮನೀಷಾ ಅವರ ಪೋಸ್ಟ್ ಅನ್ನು ಖಂಡಿಸಿದ್ದಾರೆ. ಬಹುಸಂಖ್ಯಾತತ್ವ ಪರ ನಿಲುವು ತೆಗೆದುಕೊಳ್ಳುವುದು ಸಾರ್ವಜನಿಕ ಸೇವೆಯಲ್ಲಿರುವವರಿಗೆ ಎಷ್ಟು ಸೂಕ್ತ ಎಂದು ಅವರು ಪ್ರಶ‍್ನಿಸಿದ್ದಾರೆ. ಇಂತಹ ನಡೆಗಳು ದೇಶದ ಅಲ್ಪಸಂಖ್ಯಾತರ ಭಾವನೆಗಳಿಗೆ ಘಾಸಿಯುಂಟು ಮಾಡುವ ಸಾಧ್ಯತೆ ಇದ್ದು, ಭಾರತದಲ್ಲಿನ ಜಾತ್ಯತೀತತೆಯ ಸ್ಥಿತಿ ಕುರಿತು ಪ್ರಶ‍್ನೆಗಳನ್ನು ಮೂಡಿಸಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದು ಜಾತ್ಯತೀತ ಭಾರತದ ಅಂತ್ಯವೇ ಎಂದೂ ಕೂಡಾ ಅವರು ಪ್ರಶ್ನೆಯೆತ್ತಿದ್ದಾರೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾರತದ ನಾಲ್ಕು ಮಾಜಿ ಮುಖ್ಯ ನ್ಯಾಯಾಧೀಶರು, 12 ಮಂದಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಅಯೋಧ್ಯೆ ತೀರ್ಪು ನೀಡಿದ ನ್ಯಾಯಾಧೀಶರ ಪೈಕಿ ಓರ್ವ ನ್ಯಾಯಾಧೀಶರು ಪಾಲ್ಗೊಂಡಿದ್ದನ್ನೂ ಅವರು ಪ್ರಶ್ನಿಸಿದ್ದಾರೆ. ಇಂತಹ ನಡವಳಿಕೆಯಿಂದ ಸಾರ್ವಜನಿಕರ ಮನೋಭಾವದ ಮೇಲೆ ಆಗಲಿರುವ ಭಾರಿ ಪರಿಣಾಮದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮಿಶ‍್ರಾ, ನ್ಯಾಯಾಂಗದ ಇಂತಹ ಉನ್ನತ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರಿಂದ ಸಾಮಾನ್ಯ ಜನರಿಗೆ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯಲು ಕಾರಣವಾಗಬಹುದೆ? ಎಂದೂ ಪ್ರಶ್ನಿಸಿದ್ದಾರೆ.

ನ್ಯಾ. ವಿ.ಎನ್.ಖರೆ, ನ್ಯಾ. ಎನ್‍.ವಿ.ರಮಣ, ನ್ಯಾ.ಯು.ಯು.ಲಲಿತ್ ಹಾಗೂ ಜೆ.ಎಸ್.ಖೇಹರ್ ಸೇರಿದಂತೆ ನಾಲ್ವರು ಮಾಜಿ ಮುಖ್ಯ ನ್ಯಾಯಾಧೀಶರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಸುಪ್ರೀಂ ಕೋರ್ಟ್ ನ ಹಲವಾರು ಮಾಜಿ ನ್ಯಾಯಾಧೀಶರೂ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇಂಥ ಗಣ್ಯರ ಉಪಸ್ಥಿತಿಯು ಭಾರತೀಯ ನ್ಯಾಯಾಂಗದ ನಿಷ್ಪಕ್ಷ ನಿಲುವಿನ ಕುರಿತು ಸಾರ್ವಜನಿಕ ವಲಯಗಳಲ್ಲಿ ವಿಶ್ವಾಸವನ್ನು ಅಳಿಸಿ ಹಾಕುತ್ತದೆ ಎಂದೂ ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಅವರ ಕಾರ್ಯಕ್ರಮದ ವೀಡಿಯೊ ಇಲ್ಲಿದೆ :

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News