×
Ad

ಉತ್ತರ ಪ್ರದೇಶ | ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿ ಐಟಿ ಉದ್ಯೋಗಿ ಆತ್ಮಹತ್ಯೆ

Update: 2025-02-28 19:15 IST

Photo | indiatoday

ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಪತ್ನಿಯ ವಿರುದ್ಧ ಅಕ್ರಮ ಸಂಬಂಧ ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿಕೊಂಡು ಐಟಿ ಉದ್ಯೋಗಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸುದ್ದಿಯಾಗುತ್ತಿದ್ದಂತೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪ್ರಕರಣದಂತಿದೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರಿಗೆ 2024ರ ಜನವರಿ 30ರಂದು ವಿವಾಹವಾಗಿತ್ತು. 2025ರ ಫೆಬ್ರವರಿ 24ರಂದು ಮಾನವ್ ಶರ್ಮಾ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಮೊಬೈಲ್ ಪರಿಶೀಲಿಸಿದಾಗ ಪತ್ನಿಯ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿರುವುದು ಕಂಡು ಬಂದಿದೆ. ಈ ಕುರಿತು ಮಾನವ್ ಶರ್ಮಾ ತಂದೆ ನರೇಂದ್ರ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.

ಆತ್ಮಹತ್ಯೆಗೆ ಮೊದಲು ವೀಡಿಯೊ ರೆಕಾರ್ಡ್!

ಮಾನವ್ ಶರ್ಮಾ ಆತ್ಮಹತ್ಯೆಗೆ ಮೊದಲು ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾರೆ. ವೀಡಿಯೊದಲ್ಲಿ ಅವರು ಅಳುತ್ತಾ, ಪತ್ನಿಯ ವಿರುದ್ಧ ಅಕ್ರಮ ಸಂಬಂಧದ ಆರೋಪವನ್ನು ಮಾಡಿದ್ದಾರೆ. ʼಪುರುಷರ ಬಗ್ಗೆ ಯೋಚಿಸಿʼ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಕಾನೂನುಗಳು ಪುರುಷರನ್ನು ರಕ್ಷಿಸದಿದ್ದರೆ, ಇನ್ನು ಮುಂದಕ್ಕೆ ಆರೋಪಿಸಲು ಯಾರೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ನಾನು ಈ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಮಣಿಕಟ್ಟಿನ ಮೇಲಿದ್ದ ಗಾಯದ ಗುರುತನ್ನು ವೀಡಿಯೊದಲ್ಲಿ ತೋರಿಸಿದ್ದಾರೆ.

ಮೃತನ ತಂದೆ ಹೇಳಿದ್ದೇನು?

ಮಾನವ್ ಶರ್ಮಾ ತಂದೆ, ನಿವೃತ್ತ ಏರ್ ಫೋರ್ಸ್ ಅಧಿಕಾರಿಯಾಗಿರುವ ನರೇಂದ್ರ ಶರ್ಮಾ ಈ ಕುರಿತು ಪ್ರತಿಕ್ರಿಯಿಸಿ, ನನ್ನ ಪುತ್ರ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. 2024ರ ಜನವರಿ 30ರಂದು ಅವರಿಗೆ ವಿವಾಹವಾಗಿತ್ತು. ಮೊದಲು ಅವರ ಜೀವನ ಚೆನ್ನಾಗಿಯೇ ಇತ್ತು. ಆ ಬಳಿಕ ಇಬ್ಬರ ಸಂಬಂಧ ಹದಗೆಟ್ಟಿದೆ. ಸೊಸೆ ತನ್ನ ಗೆಳೆಯನೊಂದಿಗೆ ವಾಸಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ. ನನ್ನ ಮಗನಿಗೆ ಬೆದರಿಕೆ ಹಾಕಿದ್ದಾಳೆ. ಮಗನ ಸಾವಿಗೆ ಸೊಸೆಯೇ ಕಾರಣ ಎಂದು ಆರೋಪಿಸಿದ್ದಾರೆ.

ಆರೋಪ ನಿರಾಕರಿಸಿದ ಪತ್ನಿ:

ಮಾನವ್ ಶರ್ಮಾ ಅವರ ಪತ್ನಿ ಆತ್ಮಹತ್ಯೆಗೆ ಮೊದಲು ಪತಿ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ನನ್ನ ಪತಿ ವಿಪರೀತ ಮದ್ಯಪಾನ ಮಾಡುತ್ತಿದ್ದರು. ಈ ಮೊದಲು ಕೂಡ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಅವರನ್ನು ಮೂರು ಬಾರಿ ರಕ್ಷಿಸಿದ್ದೇನೆ. ಅವರು ಮದ್ಯಪಾನ ಮಾಡಿ ನನ್ನ ಮೇಲೆಯೂ ಹಲ್ಲೆ ನಡೆಸಿದ್ದಾರೆ. ನಾನು ನನ್ನ ಅತ್ತೆಗೆ ಈ ಬಗ್ಗೆ ಹಲವಾರು ಬಾರಿ ತಿಳಿಸಿದ್ದೆ. ಆದರೆ ಅವರು ಈ ಬಗ್ಗೆ ನಿರ್ಲಕ್ಷಿಸಿದ್ದಾರೆ. ನಾನು ಪತಿಯ ಸಹೋದರಿಗೆ ಕೂಡ ಈ ಬಗ್ಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದೇನೆ, ಅದಕ್ಕೆ ಅವರು ಅವನನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ ಎಂದು ಹೇಳಿದರು.

ಪೊಲೀಸರು ಹೇಳಿದ್ದೇನು?

ಈ ಕುರಿತು ಎಎಸ್ಪಿ ವಿನಾಯಕ್ ಗೋಪಾಲ್ ಪ್ರತಿಕ್ರಿಯಿಸಿ, ʼಮಾನವ್ ಶರ್ಮಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ಮೊಬೈಲ್ ಫೋನ್ ಲಾಕ್ ಆಗಿತ್ತು. ಆದರೆ ಅವರ ಸಹೋದರಿಗೆ ಮೊಬೈಲ್ ಪಾಸ್‌ವರ್ಡ್‌ ತಿಳಿದಿತ್ತು. ಫೋನ್ ಅನ್‌ಲಾಕ್‌ ಮಾಡಿದಾಗ, ಅದರಲ್ಲಿ ಪತ್ನಿಯ ಜೊತೆಗಿನ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲʼ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News