×
Ad

ಏರ್‌ ಇಂಡಿಯಾ ದುರಂತ: ಮೃತರ ಸಂಖ್ಯೆ 274ಕ್ಕೆ ಏರಿಕೆ

Update: 2025-06-14 08:15 IST

PC: x.com/XHNews

ಅಹ್ಮದಾಬಾದ್: ಏರ್‌ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ ಬಡಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೇರಿದೆ. ವಿಮಾನದಲ್ಲಿದ್ದ 242 ಮಂದಿಯ ಪೈಕಿ ಒಬ್ಬರು ಮಾತ್ರ ಪವಾಡಸದೃಶವಾಗಿ ಬದುಕಿ ಉಳಿದಿದ್ದು, ವಿಮಾನ ಅಪ್ಪಳಿಸಿ ಬೆಂಕಿಯುಂಡೆಯಾಗಿ ಪರಿವರ್ತನೆಯಾದ ಹಾಸ್ಟೆಲ್ ನಲ್ಲಿ 33 ಮಂದಿ ಜೀವ ಕಳೆದುಕೊಂಡಿದ್ದಾರೆ.

ದುರಂತಕ್ಕೀಡಾದ ಎಐ 171 ವಿಮಾನದ ಬ್ಲ್ಯಾಕ್‌ ಬಾಕ್ಸ್ ಅನ್ನು ರಕ್ಷಣಾ ತಂಡಗಳು ಶುಕ್ರವಾರ ಪತ್ತೆ ಮಾಡಿದ್ದು, 29 ಮೃತದೇಹಗಳನ್ನು ಹೊರತೆಗೆದಿವೆ. ಇದರೊಂದಿಗೆ ಭಾರತದ ವೈಮಾನಿಕ ಇತಿಹಾಸದಲ್ಲೇ ಅಹ್ಮದಾಬಾದ್ ಘಟನೆ ಅತ್ಯಂತ ಭೀಕರ ದುರಂತ ಎನಿಸಿಕೊಂಡಿದೆ.

ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದು, ಅಹ್ಮದಾಬಾದ್ ನ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಕ್ಯಾಂಪಸ್ ನಲ್ಲಿ 33 ಮಂದಿ ಬಲಿಯಾಗಿರಬೇಕು ಎಂದು ಅಂದಾಜಿಸಲಾಗಿದೆ. ಕ್ಯಾಂಪಸ್ ನಲ್ಲಿ ಮೃತಪಟ್ಟ ಬಹುತೇಕ ಮಂದಿ ವೈದ್ಯರು, ಅವರ ಕುಟಂಬ ಸದಸ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಮೇಘಾನಿ ನಗರದ ಸುತ್ತಮುತ್ತಲಿನವರು ಎಂದು ಅಂದಾಜಿಸಲಾಗಿದೆ.

ವೈದ್ಯಕೀಯ ಕಾಲೇಜು ಕ್ಯಾಂಪಸ್ ನ ಪುರುಷರ ಮೆಸ್ ನ ಛಾವಣಿಯಲ್ಲಿ ವಿಮಾನದ ಬ್ಲ್ಯಾಕ್‌ ಬಾಕ್ಸ್ ಪತ್ತೆಯಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ನೀರಜ್ ಬದ್ಗುಜಾರ್ ಹೇಳಿದ್ದಾರೆ.  

ಕ್ಯಾಂಪಸ್ ಕಟ್ಟಡವನ್ನು ಗುರಿ ಮಾಡಿ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೂ ದುರಂತದ ಪರಿಣಾಮ ತಟ್ಟಿದೆ. ಸಂತ್ರಸ್ತರ ಗುರುತು ಪತ್ತೆಗಾಗಿ ಪೂರ್ಣ ಮತ್ತು ಭಾಗಶಃ ಉಳಿದಿರುವ 319 ದೇಹದ ಭಾಗಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಮಾನದಲ್ಲಿದ್ದ 241 ಮಂದಿಯ ಹೊರತಾಗಿ ನ್ಯೂರೋ ಸರ್ಜರಿ ವಿಭಾಗದ ಮೂವರು ವೈದ್ಯರು ಹಾಗೂ ಗರ್ಭಿಣಿ  ಮಹಿಳೆಯೊಬ್ಬರ ಗುರುತು ಪತ್ತೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News