ಅಹ್ಮದಾಬಾದ್‌ನಲ್ಲಿ 1988ರಲ್ಲೂ ಸಂಭವಿಸಿತ್ತು ವಿಮಾನ ದುರಂತ : 37 ವರ್ಷಗಳ ಬಳಿಕ ಮರುಕಳಿಸಿದ ಘಟನೆ
Photo | thehindu
ಅಹ್ಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ಏರ್‌ಇಂಡಿಯಾ ವಿಮಾನ ಪತನವಾಗಿದೆ. 169 ಭಾರತೀಯರು, 53 ಬ್ರಿಟಿಷರು ಸೇರಿದಂತೆ 241 ಮಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಅಹ್ಮದಾಬಾದ್‌ನಲ್ಲಿ ವಿಮಾನ ಪತನವಾಗುವುದು ಇದೇ ಮೊದಲಲ್ಲ. 1988ರಲ್ಲಿ ಅಂದರೆ 37 ವರ್ಷಗಳ ಮೊದಲು ʼಇಂಡಿಯನ್ ಏರ್‌ಲೈನ್ಸ್ ವಿಮಾನ 113ʼ ಅಹ್ಮದಾಬಾದ್‌ನಲ್ಲಿ ಪತನವಾಗಿತ್ತು.
1988ರ ಅಕ್ಟೋಬರ್ 19ರಂದು ಮುಂಬೈಯಿಂದ –ಅಹ್ಮದಾಬಾದ್‌ಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ 113 ಪತನವಾಗಿತ್ತು. ಇದು ಭಾರತದ ಅತ್ಯಂತ ಭೀಕರ ವಿಮಾನ ಅವಘಡಗಳಲ್ಲಿ ಒಂದಾಗಿದೆ. ಈ ಅವಘಡದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 133 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ ಒಟ್ಟು 135 ಪ್ರಯಾಣಿಕರಿದ್ದರು. ಅವರಲ್ಲಿ ಇಬ್ಬರು ಬದುಕುಳಿದಿದ್ದರು.
1988ರ ಅಕ್ಟೋಬರ್ 19ರ ಬೆಳಿಗ್ಗೆ 6.53ಕ್ಕೆ ಕಡಿಮೆ ಗೋಚರತೆಯಿಂದ ವಿಮಾನ ಮರಗಳು ಮತ್ತು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಚಿಲೋಡಾ ಕೋಟಾರ್ಪುರ್ ಗ್ರಾಮದ ಬಳಿ ಭತ್ತದ ಗದ್ದೆಗೆ ಅಪ್ಪಳಿಸಿತು. ಅಪಘಾತದ ಸ್ಥಳ ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ 2.54 ಕಿ.ಮೀ ದೂರದಲ್ಲಿತ್ತು.
ವಿಮಾನವು 5.45ಕ್ಕೆ ಹೊರಡಬೇಕಿತ್ತು. ಆದರೆ 20 ನಿಮಿಷ ವಿಳಂಬವಾಗಿ 6.05ಕ್ಕೆ ಹೊರಟಿತು, ಸಿಬ್ಬಂದಿ 6.20ಕ್ಕೆ ಅಹ್ಮದಾಬಾದ್ ಕಂಟ್ರೋಲ್ ರೂಂನ್ನು ಸಂಪರ್ಕಿಸಿದ್ದರು. 6.25ಕ್ಕೆ ATC ಅನ್ನು ಸಂಪರ್ಕಿಸಿದಾಗ ಗೋಚರತೆ ಕಡಿಮೆಯಾಗಿತ್ತು. ಅಪಘಾತ ಸಂಭವಿಸುವ ಕ್ಷಣಗಳವರೆಗೂ ವಿಮಾನ ಅಹ್ಮದಾಬಾದ್ ಎಟಿಎಸ್ ಜೊತೆ ಸಂಪರ್ಕದಲ್ಲಿತ್ತು.
ಈ ವೇಳೆ ವಿಮಾನದಲ್ಲಿ 129 ಮಂದಿ ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿಗಳಿದ್ದರು. ಈ ಭೀಕರ ಅಪಘಾತದಲ್ಲಿ ಆರು ಮಂದಿ ಸಿಬ್ಬಂದಿಯೂ ಮೃತಪಟ್ಟಿದ್ದರು.
ಗಗನಸಖಿಯರಲ್ಲಿ ಓರ್ವರಾದ ಅರ್ಚನಾ ಸೋಲಂಕಿ ಅವರ ಅಂತ್ಯಕ್ರಿಯೆಯನ್ನು ಅಹ್ಮದಾಬಾದ್‌ನಲ್ಲೇ ನಡೆಸಲಾಗಿತ್ತು. ಜೋಸೆಫ್ ಅವರ ಮೃತದೇಹವನ್ನು ಮುಂಬೈಗೆ ಕಳುಹಿಸಲಾಗಿತ್ತು.
ಈ ದುರಂತದಲ್ಲಿ ಮೃತರಲ್ಲಿ ಭಾರತೀಯ ಕಂದಾಯ ಸೇವೆಯ ಯುವ ಅಧಿಕಾರಿ ಸುಭಾಷ್ ಕುಮಾರ್ ಸೇರಿದ್ದಾರೆ. ಅವರು 23 ನೇ ವಯಸ್ಸಿನಲ್ಲಿ IRS ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
ವಿಮಾನ ಪತನದ ವೇಳೆ 12ರ ಹರೆಯದ ಬಾಲಕ ಸೇರಿದಂತೆ ಐವರು ಬದುಕುಳಿದಿದ್ದರು. ಗುಜರಾತ್ ವಿದ್ಯಾಪೀಠದ ರಿಜಿಸ್ಟ್ರಾರ್ ವಿನೋದ್ಭಾಯ್ ರೇವಾಶಂಕರ್ ತ್ರಿಪಾಠಿ (52), ರಾಜೀವ್ (40), ಪ್ರಹ್ಲಾದ್ ವಾಸವಾದ್ (29) ಮತ್ತು ಅಶೋಕ್ ಅಗರ್‌ವಾಲ್ (30) ಬದುಕುಳಿದಿದ್ದರು. ಆದರೆ, ತ್ರಿಪಾಠಿ ಮತ್ತು ಅಗರ್‌ವಾಲ್ ಅವರನ್ನು ಹೊರತುಪಡಿಸಿ ಇತರರು ಮೃತಪಟ್ಟಿದ್ದರು.
ವಿಮಾನ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಆಗಿನ ಕೇಂದ್ರ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಶಿವರಾಜ್ ಪಾಟೀಲ್ ಘೋಷಿಸಿದ್ದರು.
ಸೌಜನ್ಯ : thehindu