ರಾಜ್ಯದ ಕ್ರಮದ ಬಗ್ಗೆ ನಾಗರಿಕನ ಅಸಮಾಧಾನವನ್ನು 'ವಿಧ್ವಂಸಕ' ಚಟುವಟಿಕೆʼ ಎಂದು ಪರಿಗಣಿಸಬಹುದೇ?: ಮುಹಮ್ಮದ್ ಝುಬೈರ್ ವಿರುದ್ಧದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಪ್ರಶ್ನೆ
ಲಕ್ನೋ : ಯತಿ ನರಸಿಂಹಾನಂದ ವಿರುದ್ಧದ ಪೋಸ್ಟ್ ಕುರಿತು ದಾಖಲಾದ ಎಫ್ ಐಆರ್ ಗೆ ಸಂಬಂಧಿಸಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರನ್ನು ಬಂಧಿಸದಂತೆ ಫೆಬ್ರವರಿ 18ರವರೆಗೆ ಎಫ್ಐಆರ್‌ಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಮತ್ತು ನ್ಯಾಯಮೂರ್ತಿ ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರ ಪೀಠವು, ಮುಹಮ್ಮದ್ ಝುಬೈರ್ ಬಂಧನಕ್ಕೆ ವಿಧಿಸಿದ್ದ ತಡೆಯನ್ನು ವಿಸ್ತರಿಸಿದ್ದು, ಸೆಕ್ಷನ್ 152 ಬಿಎನ್ಎಸ್ ಅಡಿಯಲ್ಲಿ ರಾಜ್ಯದ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ನಾಗರಿಕರ ನಡೆಯನ್ನು ವಿಧ್ವಂಸಕ ಚಟುವಟಿಕೆ ಎಂದು ಪರಿಗಣಿಸಬಹುದೆ ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ವಿಭಾಗೀಯ ಪೀಠವು, ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಶ್ ಗೋಯೆಲ್ ಮತ್ತು ಅಡ್ವೊಕೇಟ್ ಶ್ರೀನಿವಾಸನ್ ಅವರಲ್ಲಿ ಝುಬೈರ್ ವಿರುದ್ಧ ಸೆಕ್ಷನ್ 152 ಬಿಎನ್ಎಸ್ ಅನ್ನು ಹೇಗೆ ಬಳಸಲಾಗಿದೆ. ಅದು ವಿಧ್ವಂಸಕ ಚಟುವಟಿಕೆಯನ್ನು ಹೇಗೆ ರೂಪಿಸಿದೆ ಎಂಬ ಬಗ್ಗೆ ವಿವರಣೆಯನ್ನು ಕೇಳಿದೆ.
ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಯತಿ ನರಸಿಂಹಾನಂದ ನೀಡಿರುವ ದ್ವೇಷ ಭಾಷಣದ ವೀಡಿಯೊವನ್ನು ಪತ್ರಕರ್ತ ಮುಹಮ್ಮದ್ ಝುಬೈರ್ ಹಂಚಿಕೊಂಡಿದ್ದರು. ನರಸಿಂಹಾನಂದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಝುಬೈರ್ ಪೋಸ್ಟ್ ಗೆ ಸಂಬಂಧಿಸಿ ಉದಿತಾ ತ್ಯಾಗಿ ಎಂಬವರು ʼಮುಸ್ಲಿಮರಿಂದ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಯತಿ ನರಸಿಂಹಾನಂದ ಅವರ ಹಳೆಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆʼ ಎಂದು ಝುಬೈರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.